* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನ ಹೆಸರು ಘೋಷಣೆ* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಲಿರುವ* ಕಳೆದ ಆವೃತ್ತಿಯ ಐಪಿಎಲ್‌ ವೇಳೆ ಮುಗಿಯುತ್ತಿದ್ದಂತೆಯೇ ನಾಯಕತ್ವದಿಂದ ಕೆಳಗಿಳಿದಿದ್ದ ವಿರಾಟ್ ಕೊಹ್ಲಿ

ಬೆಂಗಳೂರು(ಮಾ.12): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಘಳಿಗೆ ಬಂದಿದ್ದು, 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್‌ (Du Plessis) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ. RCB unbox ಕಾರ್ಯಕ್ರಮದಲ್ಲಿ ಫ್ರಾಂಚೈಸಿಯು ಈ ಮಹತ್ವದ ಘೋಷಣೆಯನ್ನು ಮಾಡಿದೆ. ಫಾಫ್ ಡು ಪ್ಲೆಸಿಸ್‌ ಈ ಹಿಂದೆ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದರು. 

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಇಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 8 ಗಂಟೆಯ ವರೆಗೆ ಉದ್ಯಾನನಗರಿ ಬೆಂಗಳೂರಿನ ಮ್ಯೂಸಿಯಂ ಕ್ರಾಸ್‌ ರೋಡ್‌ನಲ್ಲಿ RCB unbox ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ. ನೂತನ ನಾಯಕನ ಹೆಸರು ಘೋಷಿಸುವ ಮುನ್ನ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಕಳೆದ ಹದಿನಾಲ್ಕು ವರ್ಷಗಳ ನಡುವಿನ ಪಯಣವನ್ನು ಮೆಲುಕು ಹಾಕಲಾಯಿತು. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ನೂತನ ಜೆರ್ಸಿಯನ್ನು ಇಂದು ಸಂಜೆ 7 ಗಂಟೆಗೆ ಅನಾವರಣ ಮಾಡಲಿದೆ.

2013ರಿಂದ 2021ರವರೆಗೆ ವಿರಾಟ್ ಕೊಹ್ಲಿ(Virat Kohli), ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಇನ್ನು 2021ನೇ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣದ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಕೊಹ್ಲಿ ತಾವು, ಈ ಐಪಿಎಲ್ ಟೂರ್ನಿಯ ಬಳಿಕ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ವಿರಾಟ್ ಕೊಹ್ಲಿ ನಾಯತ್ವದಲ್ಲಿ ಆರ್‌ಸಿಬಿ ತಂಡವು 2016ರಲ್ಲಿ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಮುಗ್ಗರಿಸುವ ಮೂಲಕ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು.

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಆರ್‌ಸಿಬಿ ತಂಡದ ನಾಯಕ ಯಾರಾಗಬಹುದು ಎನ್ನುವ ಕುತೂಹಲ ಜೋರಾಗಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್ ಹಾಗೂ ಫಾಫ್ ಡು ಪ್ಲೆಸಿಸ್‌ ನಡುವೆ ನಾಯಕತ್ವಕ್ಕೆ ಪೈಪೋಟಿ ಏರ್ಪಟ್ಟಿತ್ತು. ಆದರೆ ನಾಯಕತ್ವದಲ್ಲಿ ಸಾಕಷ್ಟು ಅನುಭವ ಹೊಂದಿರುವ ಫಾಫ್ ಡು ಪ್ಲೆಸಿಸ್‌ ಅವರಿಗೆ ಆರ್‌ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ. 

Scroll to load tweet…

ಕಳೆದ 14 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಚಾಂಪಿಯನ್‌ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ. 2009, 2011 ಹಾಗೂ 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ನಿರಾಸೆಯನ್ನು ಅನುಭವಿಸಿತ್ತು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಸಹಾ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಪ್ಲೇ ಆಫ್‌ ಪ್ರವೇಶಿಸಿತ್ತಾದರೂ ಫೈನಲ್‌ಗೇರಲು ವಿಫಲವಾಗಿತ್ತು.

IPL 2022: ಇಂದು ಈ ಸಮಯಕ್ಕೆ RCB ಹೊಸ ನಾಯಕನ ಹೆಸರು ಘೋಷಣೆ..!

ನೂತನವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ನೇಮಕವಾದ ಫಾಫ್‌ ಡು ಪ್ಲೆಸಿಸ್‌ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಶುಭ ಹಾರೈಸಿದ್ದಾರೆ. ಫಾಫ್ ಡು ಪ್ಲೆಸಿಸ್‌ ನಾಯಕತ್ವದಡಿಯಲ್ಲಿ ತಂಡ ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇನ್ನು ಫಾಫ್ ಡು ಪ್ಲೆಸಿಸ್ ಅವರನ್ನು ಹರಾಜಿನಲ್ಲಿ ಖರೀದಿಸಿದ್ದಾಗಲೇ ನನಗೆ ಅವರು ಆರ್‌ಸಿಬಿ ನಾಯಕರಾಗಬಹುದು ಎಂದು ನನಗೆ ಅನಿಸಿತ್ತು. ಫಾಫ್ ಆರ್‌ಸಿಬಿ ನಾಯಕರಾಗಿರುವುದು ನನಗೇನು ಅಚ್ಚರಿಯೆನಿಸಿಲ್ಲ. ಅವರೊಬ್ಬ ಉತ್ತಮ ಸ್ನೇಹಿತ ಅತ್ಯುತ್ತಮ ನಾಯಕ. ಈ ಸಲ ಕಪ್ ನಮ್ದೇ ಎಂದು ಎಬಿಡಿ ಶುಭ ಹಾರೈಸಿದ್ದಾರೆ.