RCB ಇಬ್ಬರು ದಿಗ್ಗಜ ಕ್ರಿಕೆಟಿಗರ ಜೆರ್ಸಿ ನಂಬರ್‌ಗೆ ವಿದಾಯ..! Miss You Legends
ಮಾರ್ಚ್ 26ರಂದು ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮ
ಈ ಸಂದರ್ಭದಲ್ಲಿ ಗೇಲ್ ಹಾಗೂ ಎಬಿಡಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ಗೌರವ
ಈ ಇಬ್ಬರು ತೊಡುತ್ತಿದ್ದ ಜೆರ್ಸಿ ನಂಬರ್‌ಗೆ ಆರ್‌ಸಿಬಿ ವಿದಾಯದ ಮೂಲಕ ಗೌರವ

ಬೆಂಗಳೂರು(ಮಾ.18): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಂದು ದಶಕಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ ತಂಡದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್‌ಗೆ ಆರ್‌ಸಿಬಿ ಫ್ರಾಂಚೈಸಿಯು ವಿಶೇಷ ಗೌರವ ಸೂಚಿಸಲು ತೀರ್ಮಾನಿಸಿದೆ. ಇದೇ ಮಾರ್ಚ್ 26ರಂದು ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮದ ವೇಳೆ ಆರ್‌ಸಿಬಿಯು ಈ ಇಬ್ಬರು ಕ್ರಿಕೆಟಿಗರಿಗೆ ಹಾಲ್ ಆಫ್ ಫೇಮ್ ಗೌರವ ನೀಡಲು ತೀರ್ಮಾನಿಸಿದ್ದು, ಈ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂ.17 ಹಾಗೂ ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂ.333 ಅನ್ನು ಶಾಶ್ವತವಾಗಿ ನಿವೃತ್ತಿಗೊಳಿಸಲು ಆರ್‌ಸಿಬಿ ಫ್ರಾಂಚೈಸಿಯು ನಿರ್ಧರಿಸಿದೆ.
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್ 2011ರಿಂದ 2021ರವರೆಗೆ ಒಟ್ಟು 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ ಒಟ್ಟು 156 ಪಂದ್ಯಗಳನ್ನಾಡಿರುವ ಎಬಿ ಡಿವಿಲಿಯರ್ಸ್ 37 ಅರ್ಧ ಶತಕ ಹಾಗೂ 2 ಶತಕ ಸಹಿತ ಒಟ್ಟಾರೆ 4,491 ರನ್ ಬಾರಿಸಿ ಮಿಂಚಿದ್ದಾರೆ. ಎಬಿ ಡಿವಿಲಿಯರ್ಸ್ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಎಬಿ ಡಿವಿಲಿಯರ್ಸ್ ಆಡಿದ ಹಲವು ಟಿ20 ಇನಿಂಗ್ಸ್‌ಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಎಬಿ ಡಿವಿಲಿಯರ್ಸ್, 2021ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆರ್‌ಸಿಬಿ ಪರ 150+ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದರು ಎನ್ನುವುದು ಮತ್ತೊಂದು ವಿಶೇಷ.
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 5 ಬಾರಿ 100+ ರನ್ ಹಾಗೂ ಎರಡು ಬಾರಿ 200+ ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈ ಎರಡು ದಾಖಲೆಯ ಜತೆಯಾಟವಾಡಿದ ಜಗತ್ತಿನ ಏಕೈಕ ಜೋಡಿ ಎನ್ನುವ ಹೆಗ್ಗಳಿಕೆ ಈ ಇಬ್ಬರು ಆಟಗಾರರಿಗೆ ಸಲ್ಲುತ್ತದೆ.
ಇನ್ನು ವೆಸ್ಟ್ ಇಂಡೀಸ್ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಕೂಡಾ 2011ರಿಂದ 2017ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್‌ಗಳ ಎದೆ ನಡುಗಿಸುತ್ತಿದ್ದ ಗೇಲ್ ಅವರ 333 ನಂಬರ್ ಜೆರ್ಸಿಗೆ ಇದೀಗ ಆರ್‌ಸಿಬಿ ಶಾಶ್ವತ ವಿದಾಯ ಹೇಳುವ ಮೂಲಕ ವಿನೂತನ ಗೌರವ ನೀಡಲು ತೀರ್ಮಾನಿಸಿದೆ.
IPL 2023: ವಿಲ್ ಜ್ಯಾಕ್ಸ್ ಬದಲಿಗೆ RCB ತಂಡಕ್ಕೆ ಹೊಸ ಕಿವೀಸ್ ಅಸ್ತ್ರ ಸೇರ್ಪಡೆ...!
2013ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಆಡಿದ 16 ಪಂದ್ಯಗಳಲ್ಲಿ 708 ರನ್ ಸಿಡಿಸಿದ್ದರು. ಇದರಲ್ಲಿ ಅಜೇಯ 175 ರನ್‌ಗಳ ಇನಿಂಗ್ಸ್ ಕೂಡಾ ಒಂದಾಗಿತ್ತು. ಈ ವೈಯುಕ್ತಿಕ ಗರಿಷ್ಠ ಸ್ಕೋರ್ ದಾಖಲೆ ಐಪಿಎಲ್‌ನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.
ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, 2009ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ 2011ರಿಂದ 2017ರ ವರೆಗೆ ಆರ್‌ಸಿಬಿ ಕಣಕ್ಕಿಳಿದಿದ್ದ ಗೇಲ್, ಇದಾದ ಬಳಿಕ 4 ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.