IPL 2022 : ಹಾಲ್ ಆಫ್ ಫೇಮ್ ಪರಿಚಯಿಸಿದ ಆರ್ ಸಿಬಿ, ಗೌರವ ಪಡೆದ ಮೊದಲಿಗರಾದ ಕ್ರಿಸ್ ಗೇಲ್, ಎಬಿಡಿ!
ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡ ಫ್ರಾಂಚೈಸಿಗೆ ಸಾಕಷ್ಟು ಕೊಡುಗೆ ನೀಡಿದ ತನ್ನ ಆಟಗಾರರಿಗೆ ಹಾಲ್ ಆಫ್ ಫೇಮ್ ಗೌರವ ನೀಡುವುದನ್ನು ಆರಂಭಿಸಿದೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಈ ಗೌರವ ಪಡೆದ ಮೊದಲ ಎರಡು ಆಟಗಾರರೆನಿಸಿದ್ದಾರೆ.
ಬೆಂಗಳೂರು (ಮೇ.17): ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಭಾರೀ ಸೋಲನ್ನು ಎದುರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore), ಇದೀಗ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸುತ್ತಿದೆ. ಇದರ ನಡುವೆ ಇತ್ತೀಚೆಗಷ್ಟೇ ಫ್ರಾಂಚೈಸಿ ಮಾಲೀಕರು ತಮ್ಮ ತಂಡದ ಮಾಜಿ ಆಟಗಾರರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬೆಂಗಳೂರು ಮೂಲದ ಫ್ರಾಂಚೈಸಿ ತನ್ನ ಮಾಜಿ ಆಟಗಾರರಿಗಾಗಿ ಇದೇ ಮೊದಲ ಬಾರಿಗೆ 'ಹಾಲ್ ಆಫ್ ಫೇಮ್' (Hall Of Game)ಪ್ರಶಸ್ತಿಯನ್ನು ಪರಿಚಯಿಸಿದ್ದು, ಕ್ರಿಸ್ ಗೇಲ್ (Chris Gayle) ಹಾಗೂ ಎಬಿ ಡಿವಿಲಿಯರ್ಸ್ (AB de Villiers ) ಈ ಗೌರವ ಪಡೆದ ಮೊದಲ ಎರಡು ಆಟಗಾರರು ಎನಿಸಿದ್ದಾರೆ. ಆರ್‌ಸಿಬಿ (RCB) ಪರ ಎಬಿ ಡಿವಿಲಿಯರ್ಸ್ 11 ವರ್ಷ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷ ಆಡಿದ್ದಾರೆ.
ಈ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ (Virat Kohli) ಇಬ್ಬರೂ ಆಟಗಾರರೊಂದಿಗಿನ ಜೊತೆಯಾಟ ಮತ್ತು ನಾಯಕತ್ವದ ಅನುಭವ ಹೇಗಿತ್ತು ಎನ್ನುವುದನ್ನು ನೆನಪಿಸಿಕೊಂಡರು. ಎಬಿ ಡಿವಿಲಿಯರ್ಸ್ ಬಗ್ಗೆ ಮಾತನಾಡುವಾಗ, ವಿರಾಟ್ ಕೊಹ್ಲಿ ಅವರು ಮತ್ತು ಎಬಿ ಹೇಗೆ ಚೆನ್ನಾಗಿ ಬಾಂಧವ್ಯ ಹೊಂದಿದ್ದರು ಮತ್ತು ಎಬಿ ಡಿವಿಲಿಯರ್ಸ್ ಅವರ ನೆಚ್ಚಿನ ಇನ್ನಿಂಗ್ಸ್ ಗಳು ಯಾವುದು ಎನ್ನುವುದನ್ನು ಹಂಚಿಕೊಂಡರು ಮತ್ತು ಆರ್‌ಸಿಬಿಯನ್ನು ಫೈನಲ್‌ಗೆ ಕೊಂಡೊಯ್ಯಲು ಐಪಿಎಲ್ 2016 ರ ಕ್ವಾಲಿಫೈಯರ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಹೇಗೆ ನಿರ್ಣಾಯಕ ಇನ್ನಿಂಗ್ಸ್ ಆಡಿದರು ಎಂಬುದನ್ನು ನೆನಪಿಸಿಕೊಂಡರು.
ಕ್ರಿಸ್ ಗೇಲ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಆರ್ ಸಿಬಿ ಪರವಾಗಿ ಗೇಲ್ ಬಾರಿಸಿದ 175 ರನ್ ಗಳ ಭರ್ಜರ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡರು.ಪ್ರಸ್ತುತ ಕ್ರಿಕಟ್ ನಲ್ಲಿ ಕ್ರಿಸ್ ಗೇಲ್ ಗಿಂತ ಉತ್ತಮ ಹಾರ್ಡ್ ಹಿಟ್ಟರ್ ಬ್ಯಾಟ್ಸ್ ಮನ್ ಅನ್ನು ತಾವು ನೋಡಿಲ್ಲ ಎಂದು ಹೇಳಿದರು.
ಕ್ರಿಸ್ ಗೇಲ್ ಹಾಗೂ ಎಬಿ ಎಬಿಡಿವಿಲಿಯರ್ಸ್ ಇಬ್ಬರೂ ಕಾರ್ಯಕ್ರಮಕ್ಕೆ ವಿಡಿಯೋ ಕಾಲ್ ಮೂಲಕ ಉಪಸ್ಥಿತರಿದ್ದರು. ಅದರೊಂದಿಗೆ ಆರ್ ಸಿಬಿ ಜೊತೆಯಲ್ಲಿ ಆಡಿದ ದಿನಗಳನ್ನೂ ಈ ಇಬ್ಬರೂ ಆಟಗಾರರು ನೆನಪಿಸಿಕೊಂಡರು. ಮುಂದಿನ ವರ್ಷ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆರ್‌ಸಿಬಿ ಮಾಜಿ ಕ್ರಿಕೆಟಿಗರಿಗೆ ಎರಡು ಸ್ಮರಣಿಕೆಗಳನ್ನು ನೀಡಲಾಗುತ್ತದೆ.
ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡುವುದನ್ನು ನೋಡಬಹುದಾಗಿತ್ತು. ಇದೇ ಮೊದಲ ಬಾರಿಗೆ ಐಪಿಎಲ್ ನ ಫ್ರಾಂಚೈಸಿಯೊಂದು ತನ್ನ ಬೆಸ್ಟ್ ಆಟಗಾರನಿಗೆ ಈ ಗೌರವವನ್ನು ನೀಡಿದೆ.
IPL 2022 ಪಂಜಾಬ್ ಮಣಿಸಿದ ಡೆಲ್ಲಿ, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ!
ವರ್ಷ ಆರ್ ಸಿಬಿ ಪರ ಆಡಿದ್ದ ಗೇಲ್: 2011ರಲ್ಲಿ ಡಿರ್ಕ್ ನ್ಯಾನ್ಸ್ ಬದಲಿ ಆಟಗಾರನಾಗಿ ಆರ್ ಸಿಬಿ ತಂಡವನ್ನು ಕೂಡಿಕೊಂಡಿದ್ದ ಕ್ರಿಸ್ ಗೇಲ್, ಅದಕ್ಕೂ ಮುನ್ನ ಮೂರು ವರ್ಷಗಳ ಕಾಲ ಕೆಕೆಆರ್ ಪರ ಆಡಿದ್ದರು. 2011ರಿಂದ 2017ರವರೆಗೆ ಆರ್ ಸಿಬಿ ತಂಡದಲ್ಲಿದ್ದ ಗೇಲ್, 91 ಪಂದ್ಯಗಳಿಂದ, 21 ಅರ್ಧಶತಕ ಹಾಗೂ ಐದು ಶತಕ ಸೇರಿದಂತೆ 3420 ರನ್ ಬಾರಿಸಿದ್ದಾರೆ. ಪುಣೆ ವಾರಿಯರ್ಸ್ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ 175 ರನ್ ಗಳ ಇನ್ನಿಂಗ್ಸ್ ಆಡಿದ್ದು, ಆರ್ ಸಿಬಿ ಪರವಾಗಿ ಹಾಗೂ ಐಪಿಎಲ್ ನಲ್ಲಿ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿದೆ.
ಮಹಿಳಾ ಟಿ20 ಚಾಲೆಂಜ್‌ಗೆ 3 ಬಲಿಷ್ಠ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ..!
ಆರ್ ಸಿಬಿಯ ಆಪತ್ಭಾಂದವ ಎಬಿಡಿ: ಕಷ್ಟದ ಕಾಲದಲ್ಲಿ ಆರ್ ಸಿಬಿ ಬಲವಾಗಿ ನಿಲ್ಲುತ್ತಿದ್ದ ಕಾರಣಕ್ಕೆ ಆರ್ ಸಿಬಿ ಆಪತ್ಭಾಂಧವ ಎನಿಸಿಕೊಂಡಿದ್ದ ಎಬಿಡಿ ವಿಲಿಯರ್ಸ್ ಆಡುವ ದಿನಗಳವರೆಗೂ ತಂಡದ ಪ್ರಮುಖ ಆಧಾರಸ್ತಂಭ ಎನಿಸಿದ್ದರು. 2011 ರಿಂದ 2021ರವರೆಗೆ ಆರ್ ಸಿಬಿ ಪರವಾಗಿ ವಿಲಿಯರ್ಸ್ ಆಡಿದ್ದರು. ಆರ್ ಸಿಬಿ ಪರ 157 ಪಂದ್ಯಗಳನ್ನು ಆಡಿದ್ದ ಎಬಿಡಿ, 41.10ರ ಸರಾಸರಿಯಲ್ಲಿ 4522 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ, 37 ಅರ್ಧಶತಕ ಸೇರಿದೆ.