ಮಹಿಳಾ ಟಿ20 ಚಾಲೆಂಜ್‌ಗೆ 3 ಬಲಿಷ್ಠ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ..!
* ಮಹಿಳಾ ಟಿ20 ಚಾಲೆಂಜ್ ಟೂರ್ನಿಯು ಮೇ 23ರಿಂದ ಆರಂಭ
* 3 ತಂಡಗಳ ನಡುವಿನ ಟಿ20 ಸರಣಿಗೆ ಆಟಗಾರ್ತಿಯರ ತಂಡ ಪ್ರಕಟ
* ಅನುಭವಿ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ, ಮಿಥಾಲಿ ರಾಜ್‌ಗೆ ರೆಸ್ಟ್
ಮುಂಬೈ(ಮೇ.16): ನಾಲ್ಕನೇ ಆವೃತ್ತಿಯ ಮೂರು ತಂಡಗಳನ್ನೊಳಗೊಂಡ ಮಹಿಳಾ ಟಿ20 ಚಾಲೆಂಜ್ ಟೂರ್ನಿಗೆ (Women’s T20 Challenge 2022) ಬಿಸಿಸಿಐ ಬಲಿಷ್ಠ ಆಟಗಾರ್ತಿಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಹರ್ಮನ್‌ಪ್ರೀತ್ ಕೌರ್ (Harmanpreet Kaur), ಸ್ಮೃತಿ ಮಂಧನಾ (Smriti Mandhana) ಹಾಗೂ ದೀಪ್ತಿ ಶರ್ಮಾ (Deepti Sharma) ನಾಯಕಿಯರಾಗಿ ನೇಮಕವಾಗಿದ್ದಾರೆ. ಇನ್ನು ಇದೇ ವೇಳೆ ಹಿರಿಯ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ ಹಾಗೂ ಮಿಥಾಲಿ ರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
2020 ಮತ್ತು 2021ರಲ್ಲಿ ಕೋವಿಡ್ ಭೀತಿಯಿಂದಾಗಿ ಮಹಿಳಾ ಟಿ20 ಟೂರ್ನಿಯನ್ನು ಆಯೋಜಿಸಲು ಬಿಸಿಸಿಐಗೆ ಸಾಧ್ಯವಾಗಿರಲಿಲ್ಲ. ಇದೀಗ ಮೂರು ತಂಡಗಳನ್ನೊಳಗೊಂಡ ನಾಲ್ಕನೇ ಆವೃತ್ತಿಯ ಮಹಿಳಾ ಟಿ20 ಚಾಲೆಂಜ್ ಟೂರ್ನಿಯು ಮೇ 23ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಮೂರನೇ ಆವೃತ್ತಿಯ ಫೈನಲಿಸ್ಟ್‌ಗಳಾದ ಟ್ರೈಯಲ್‌ಬ್ಲೇಜರ್ ಹಾಗೂ ಸೂಪರ್‌ನೊವಾಸ್ ತಂಡಗಳು ಸೆಣಸಾಡಲಿವೆ. ಇನ್ನು ಫೈನಲ್ ಪಂದ್ಯವು ಮೇ 28ರಂದು ನಡೆಯಲಿದ್ದು, ಈ ಎಲ್ಲಾ ಪಂದ್ಯಗಳಿಗೆ ಪುಣೆಯ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಲಿದೆ.
ಸೂಪರ್‌ನೋವಾಸ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್, ಟ್ರೈಯಲ್‌ಬ್ಲೇಸರ್ ತಂಡಕ್ಕೆ ಸ್ಮೃತಿ ಮಂಧನಾ ನಾಯಕಿಯಾಗಿ ಮುಂದುವರೆದಿದ್ದಾರೆ. ಆದರೆ ವೆಲಾಸಿಟಿ ತಂಡಕ್ಕೆ ಕಳೆದ ಬಾರಿ ಮಿಥಾಲಿ ರಾಜ್ ನಾಯಕಿಯಾಗಿ ನೇಮಕವಾಗಿದ್ದರು. ಈ ಬಾರಿ ವೆಲಾಸಿಟಿ ತಂಡವನ್ನು ಆಲ್ರೌಂಡರ್ ದೀಪ್ತಿ ಶರ್ಮಾ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ಅತ್ಯುತ್ತಮ ಆಟಗಾರ್ತಿಯರು ಹಾಗೂ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡದ ತಾರಾ ಆಟಗಾರ್ತಿಯರು ಈ ವರ್ಷ ನಡೆಯಲಿರುವ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ
ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಮೂರು ತಂಡಗಳಿಗೂ ತಲಾ 16 ಆಟಗಾರ್ತಿಯರನ್ನು ಆಯ್ಕೆ ಮಾಡಿದೆ. ಮೇ 23ರಂದು ಟ್ರೈಯಲ್‌ಬ್ಲೇಸರ್ ಹಾಗೂ ಸೂಪರ್‌ನೊವಾಸ್ ತಂಡಗಳು ಸೆಣಸಾಟ ನಡೆಸಲಿವೆ. ಮೇ 24ರಂದು ಸೂಪರ್‌ನೊವಾಸ್ ತಂಡವು ವೆಲಾಸಿಟಿ ತಂಡವನ್ನು ಎದುರಿಸಲಿದೆ. ಇನ್ನು 26ರಂದು ವೆಲಾಸಿಟಿ ಹಾಗೂ ಟ್ರೈಯಲ್‌ಬ್ಲೇಜರ್ಸ್ ತಂಡವು ಕಾದಾಡಲಿವೆ. ಈ ಪಂದ್ಯಾವಳಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಮೇ 28ರಂದು ಪ್ರಶಸ್ತಿಗಾಗಿ ಕಾದಾಡಲಿವೆ.
IPL 2022: ರೀಟೈನ್ ಮಾಡಿಕೊಂಡಿದ್ದ ಈ ಐವರಿಗೆ ಮುಂದಿನ ವರ್ಷ ಗೇಟ್‌ಪಾಸ್ ಫಿಕ್ಸ್..!
ಮಹಿಳಾ ಟಿ20 ಚಾಲೆಂಜ್ ಟೂರ್ನಿಗೆ ತಂಡಗಳು ಹೀಗಿವೆ ನೋಡಿ
ಸೂಪರ್‌ನೊವಾಸ್: ಹರ್ಮನ್‌ಪ್ರೀತ್ ಕೌರ್(ನಾಯಕಿ), ತಾನಿಯಾ ಭಾಟಿಯಾ(ಉಪನಾಯಕಿ), ಅಲ್ನಾ ಕಿಂಗ್, ಆಯುಷ್ ಸೋನಿ, ಚಂದು ವಿ, ದಿಯೇಂದ್ರಾ ಡೊಟ್ಟೀನ್, ಹರ್ಲಿನ್ ಡಿಯೋಲ್, ಮೆಘನಾ ಸಿಂಗ್, ಮೊನಿಕಾ ಪಟೇಲ್, ಮುಸ್ಕಾನ್ ಮಲಿಕ್, ಪೂಜಾ ವಸ್ತ್ರಾಕರ್, ಪ್ರಿಯಾ ಪೂನಿಯಾ, ರಾಶಿ ಕನೋಜಿಯಾ, ಸೋಫಿ ಎಕೆಲ್‌ಸ್ಟೋನ್, ಸುನೆ ಲೌಸ್, ಮಾನ್ಸಿ ಜೋಶಿ
ಟ್ರೈಯಲ್‌ಬ್ಲೇಜರ್ಸ್: ಸ್ಮೃತಿ ಮಂಧನಾ(ನಾಯಕಿ), ಪೂನಂ ಯಾದವ್(ಉಪನಾಯಕಿ), ಅರುಂದತಿ ರೆಡ್ಡಿ, ಹೀಲೆ ಮ್ಯಾಥ್ಯೂಸ್, ಜೆಮಿಯಾ ರೋಡ್ರಿಗಸ್, ಪ್ರಿಯಾಂಕ ಪ್ರಿಯದರ್ಶಿನಿ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್. ಮೇಘನಾ, ಸಾಕಿಯಾ ಐಸಾಕ್, ಸಲ್ಮಾ ಖತುನ್, ಶರ್ಮಿಮ್ ಅಖ್ತರ್, ಸೋಫಿಯಾ ಬ್ರೌನ್, ಸುಜಾತ ಮಲಿಕ್, ಎಸ್ ಬಿ ಫಖರ್‌ಕರ್.
ವೆಲಾಸಿಟಿ: ದೀಪ್ತಿ ಶರ್ಮಾ(ನಾಯಕ), ಸ್ನೆಹ್ ರಾಣಾ(ಉಪನಾಯಕ), ಶಫಾಲಿ ವರ್ಮಾ, ಆಯಾಬೊಂಗ ಖಾಕ, ಕೆ.ಪಿ. ನವಾಗ್ರಿ, ಕತ್ರಾಯನ್ ಕ್ರಾಸ್, ಕೀರ್ತಿ ಜೇಮ್ಸ್, ಲೌರಾ ವೋಲ್ವರ್ಡ್ತ್, ಮಾಯಾ ಸೋನಾವನೆ, ನತ್ತಕನ್ ಚಾಂತಮ್, ರಾಧಾ ಯಾದವ್, ಆರ್ತಿ ಕೇದರ್, ಶಿವಾಲಿ ಶಿಂಧೆ, ಸಿಮ್ರಾನ್ ಬಹದ್ದೂರ್, ಯಾಶ್ತಿಕಾ ಭಾಟಿಯಾ, ಪ್ರಣವಿ ಚಂದ್ರ.