* ರೋಹಿತ್ ಶರ್ಮಾ ಪರ ಬ್ಯಾಟ್ ಬೀಸಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ* ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಆಕ್ರಮಣಕಾರಿ ಆಟವಾಡಲಿ ಎಂದ ರಮೀಜ್ ರಾಜಾ* ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿ.

ಕರಾಚಿ(ಜೂ.02): ನ್ಯೂಜಿಲೆಂಡ್ ವಿರುದ್ದದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಪರ ಯಾರು ಇನಿಂಗ್ಸ್ ಆರಂಭಿಸಬೇಕು ಎನ್ನುವ ಚರ್ಚೆ ಸಾಕಷ್ಟು ಜೋರಾಗಿ ಕೇಳಿ ಬರುತ್ತಿದೆ. ಸೌಥಾಂಪ್ಟನ್‌ನಲ್ಲಿ ಜೂನ್‌ 18ರಿಂದ ಜೂನ್‌ 22ರವರೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಬಹುತೇಕ ಪಕ್ಕಾ ಆಗಿದೆ, ಆದರೆ ಆರಂಭಿಕರ ಸ್ಥಾನಕ್ಕೆ ಸದ್ಯ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ.

ಸದ್ಯದ ಪ್ರಕಾರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಪರ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ. ಆಸ್ಟ್ರೇಲಿಯಾ ವಿರುದ್ದದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಜೋಡಿ ಉತ್ತಮ ಪ್ರದರ್ಶನ ನೀಡಿತ್ತು. ಇದೀಗ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ರಮೀಜ್ ರಾಜಾ ಭಾರತ ತಂಡದ ಆರಂಭಿಕರ ಬಗ್ಗೆ ಅದರಲ್ಲೂ ರೋಹಿತ್ ಆಕ್ರಮಣಕಾರಿ ಆಟದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಿವೀಸ್, ಭಾರತದೆದುರು ಕ್ಲೀನ್ ಸ್ವೀಪ್‌ ಮಾಡಲು ಎದುರು ನೋಡುತ್ತಿದ್ದೇವೆ: ಜೋ ರೂಟ್‌

ರೋಹಿತ್ ಶರ್ಮಾ ಆಟಕ್ಕೆ ಕುದುರಿಕೊಂಡರೆ ಖಂಡಿತವಾಗಿಯೂ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ದ್ವಿಶತಕ ಬಾರಿಸಬಲ್ಲರು. ಗಿಲ್ ಹಾಗೂ ರೋಹಿತ್ ಶರ್ಮಾ ಇಬ್ಬರೂ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಾಗಿರುವುದರಿಂದ ಇಂಗ್ಲೆಂಡ್ ವಾತಾವರಣದಲ್ಲಿ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ ರೋಹಿತ್ ಶರ್ಮಾ ಏನಾದರೂ ಅಬ್ಬರಿಸಿದರೆ ಹಿಟ್‌ ಮ್ಯಾನ್ ಬ್ಯಾಟಿಂಗ್ ದ್ವಿಶತಕ ದಾಖಲಾಗಬಹುದು ಎಂದು ರಾಜಾ ಹೇಳಿದ್ದಾರೆ.

ಇಂಗ್ಲೆಂಡ್ ವಾತಾವರಣದ ಬಗ್ಗೆ ಹೆಚ್ಚು ಆಲೋಚಿಸಲು ಹೋಗಬೇಡಿ. ಮೈದಾನದಲ್ಲಿ ನಿಮ್ಮ ಅಟವನ್ನು ನೀವು ಪ್ರದರ್ಶಿಸಿ. ಆದರೆ ನಿಮ್ಮ ಆಕ್ರಮಣಕಾರಿ ಆಟದ ಮನಸ್ಥಿತಿಯಿಂದ ಹಿಂದೆ ಸರಿಯಬೇಡಿ. ಭಾರತ ಕ್ರಿಕೆಟ್ ತಂಡದ ಬಲ ನಿಂತಿರುವುದೇ ಆಕ್ರಮಣಕಾರಿ ಆಟದ ಮನೋಭಾವದಿಂದಾಗಿ ಎಂದು ರಮೀಜ್ ರಾಜಾ ಅಭಿಪ್ರಾಯ ಪಟ್ಟಿದ್ದಾರೆ.