2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. 11 ವರ್ಷಗಳ ಬಳಿಕ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಈ ಗೆಲುವಿಗೆ ಎಲ್ಲಾ ಆಟಗಾರರ ಶ್ರಮವಿದೆ. ಇವುಗಳ ಪೈಕಿ 8 ಆಟಗಾರರು ಶ್ರಮ ಮರೆಯುವಂತಿಲ್ಲ. ಈ 8 ಆಟಗಾರರ ಪೈಕಿ ನಿಜವಾದ ಗೇಮ್‌ ಚೇಂಜರ್ ಯಾರು ನೀವೇ ಹೇಳಿ.

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ವಿಶ್ವಕಪ್ ಗೆಲ್ಲಲು ಎಲ್ಲಾ ಆಟಗಾರರು ತಮ್ಮ ಶಕ್ತಿ ಮೀರಿ ಹೋರಾಟ ತೋರಿದ್ದಾರೆ. ಇದರ ಹೊರತಾಗಿಯೂ ಈ ವಿಶ್ವಕಪ್ ಗೆಲ್ಲಲು ಹೆಚ್ಚು ಶ್ರಮಿಸಿದ ನಿಜವಾದ ಗೇಮ್‌ಚೇಂಜರ್‌ಗಳು ಯಾರು ಎನ್ನುವುದನ್ನು ನೋಡೋಣ ಬನ್ನಿ.

1. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಗ್ರೂಪ್ ಹಂತದಿಂದ ಸೆಮಿಫೈನಲ್‌ವರೆಗೂ 7 ಪಂದ್ಯಗಳನ್ನಾಡಿ ಕೇವಲ 75 ರನ್ ಬಾರಿಸಿದ್ದರು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೊಹ್ಲಿ, ಫೈನಲ್‌ ಪಂದ್ಯದಲ್ಲಿ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದಾಗ ಅಬ್ಬರಿಸಿದ್ದರು. ದಕ್ಷಿಣ ಆಫ್ರಿಕಾ ಎದುರಿನ ಫೈನಲ್‌ನಲ್ಲಿ ಕೊಹ್ಲಿ ಅಮೂಲ್ಯ 76 ರನ್ ಬಾರಿಸಿದ್ದರು.

ಟೀಂ ಇಂಡಿಯಾ ಫೈನಲ್‌ನಲ್ಲಿ 176 ರನ್ ಬಾರಿಸಿದರೆ, 76 ರನ್ ಕೊಹ್ಲಿ ಬ್ಯಾಟಿಂದಲೇ ಬಂತು. ಒಂದು ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕೂಡಾ ಕೈಕೊಟ್ಟಿದ್ದರೇ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತೇನೋ.

ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹವಾ..! ಅತಿಹೆಚ್ಚು ಲೈಕ್ ಪಡೆದ ಆ ಪೋಸ್ಟ್‌ನಲ್ಲಿ ಅಂತದ್ದೇನಿದೆ?

2. ರೋಹಿತ್ ಶರ್ಮಾ:

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಕೊನೆಗೂ ನಾಯಕನಾಗಿ ದಶಕದ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿ ಬರ ನೀಗಿಸುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸುವ ಮೂಲಕ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವಲ್ಲಿ ಹಿಟ್‌ಮ್ಯಾನ್ ಯಶಸ್ವಿಯಾದರು.

ಅದರಲ್ಲೂ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಹಾಗೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ರೋಹಿತ್ ಶರ್ಮಾ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇನ್ನು ಫೈನಲ್‌ನಲ್ಲಿ ಮಹತ್ವದ ಘಟ್ಟದಲ್ಲಿ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಬೌಲಿಂಗ್‌ ದಾಳಿಗಿಳಿಸಿ ಕೈಜಾರಿದ್ದ ಪಂದ್ಯವನ್ನು ಗೆಲ್ಲುವಲ್ಲಿ ರೋಹಿತ್ ಶರ್ಮಾ ಯಶಸ್ವಿಯಾದರು. ಈ ಮೂಲಕ ರೋಹಿತ್ ಶರ್ಮಾ ತಾವೊಬ್ಬ ಯಶಸ್ವಿ ಹಾಗೂ ಚಾಣಾಕ್ಷ ಬ್ಯಾಟರ್ ಎನ್ನುವುದನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದರು.

ಟೀಂ ಇಂಡಿಯಾ ಕೋಚ್ ಹುದ್ದೆಗೆ ಇಬ್ಬರ ಹೆಸರು ಶಾರ್ಟ್‌ಲಿಸ್ಟ್ ಆಗಿದೆ: BCCI ಕಾರ್ಯದರ್ಶಿ ಜಯ್ ಶಾ ಅಚ್ಚರಿ ಹೇಳಿಕೆ

3. ರಿಷಭ್ ಪಂತ್:

2022ರ ಡಿಸೆಂಬರ್‌ನಲ್ಲಿ ಕಾರು ಅಪಘಾತಕ್ಕೊಳಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವರ್ಷಗಳ ಕಾಲ ದೂರ ಉಳಿದಿದ್ದ ಪಂತ್, ಟಿ20 ವಿಶ್ವಕಪ್‌ಗೆ ನೇರವಾಗಿ ಆಯ್ಕೆಯಾಗಿದ್ದರು. ಆರಂಭಿಕ ಪಂದ್ಯಗಳಲ್ಲಿ ಪಂತ್ ಜವಾಬ್ದಾರಿಯುತ ಆಟವಾಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

4. ಹಾರ್ದಿಕ್ ಪಾಂಡ್ಯ:

ಹಾರ್ದಿಕ್‌ ಕಳೆದ 6 ತಿಂಗಳಲ್ಲಿ ಎದುರಿಸಿದ ಟೀಕೆ, ಅನುಭವಿಸಿದ ನೋವು, ಅವಮಾನ ಅಷ್ಟಿಷ್ಟಲ್ಲ. ಐಪಿಎಲ್‌ ವೇಳೆ ಮೈದಾನಕ್ಕೆ ನಾಯಿ ನುಗ್ಗಿದಾಗಲೂ ‘ಹಾರ್ದಿಕ್ ಹಾರ್ದಿಕ್‌’ ಎಂದು ಕೆಲ ಅಭಿಮಾನಿಗಳು ಕೂಗಿದ್ದರು. ಕಳಪೆ ಆಟ, ಐಪಿಎಲ್‌ ನಾಯಕತ್ವ, ದಾಂಪತ್ಯದಲ್ಲಿ ಬಿರುಕು ಹೀಗೆ ಹಲವು ಸವಾಲು ಎದುರಿಸಿದ್ದ ಹಾರ್ದಿಕ್‌ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಅಮೋಘ ಪ್ರದರ್ಶನ ತೋರಿದ್ದರು.

ಅದರಲ್ಲೂ ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಹೆನ್ರಿಚ್ ಕ್ಲಾಸೇನ್ ಹಾಗೂ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಗೇಮ್‌ ಚೇಂಜರ್ ಎನಿಸಿಕೊಂಡರು.

5. ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಬೌಲಿಂಗ್ ಮಾಡಲಿಲ್ಲ, ಬದಲಾಗಿ ಬೆಂಕಿಯುಂಡೆಯನ್ನೇ ಉಗುಳಿದರು ಎಂದರೆ ಅತಿಶಯೋಕ್ತಿಯಾಗಲಾರದು. ಗಾಯದ ಸಮಸ್ಯೆ, ಶಸ್ತ್ರಚಿಕಿತ್ಸೆಗಳಿಂದಾಗಿ ಸಾಕಷ್ಟು ಸಮಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಬುಮ್ರಾ, ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಅದರಲ್ಲೂ ಹೊಡಿಬಡಿಯಾಟಕ್ಕೆ ಹೆಸರುವಾಸಿಯಾದ ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ ಎದುರು ಬ್ಯಾಟ್‌ ಬೀಸಲು ಎದುರಾಳಿ ಬ್ಯಾಟರ್‌ಗಳು ಟೂರ್ನಿಯುದ್ದಕ್ಕೂ ಪರದಾಡಿದರು. ಫೈನಲ್‌ನಲ್ಲಿ ಬುಮ್ರಾ ಎಸೆದ ಎರಡು ಓವರ್‌ಗಳ ಎರಡು ಸ್ಪೆಲ್ ಯಾವ ಭಾರತೀಯ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಬುಮ್ರಾ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

6. ಅಕ್ಷರ್ ಪಟೇಲ್‌:

ಟಿ20 ವಿಶ್ವಕಪ್‌ಗೆ ಅಕ್ಷರ್ ಆಯ್ಕೆಯಾದಾಗ ಬಹುತೇಕರು ಬಿಸಿಸಿಐ ನಿರ್ಧಾರ ಪ್ರಶ್ನಿಸಿದ್ದರು. ಗುಜರಾತ್‌ ಕೋಟಾದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಟೀಕಿಸಿದ್ದರು. ಆದರೆ ಅಕ್ಷರ್‌ ವಿಶ್ವಕಪ್‌ ಗೆಲುವಿನ ಹೀರೋ. ಅಕ್ಷರ್ ಅವಕಾಶ ಸಿಕ್ಕಾಗಲೆಲ್ಲಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

7. ಸೂರ್ಯಕುಮಾರ್ ಯಾದವ್:

ಭಾರತದ ನಂ.1 ಟಿ20 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಗ್ರೂಪ್ ಹಂತದಲ್ಲಿ ಹಾಗೂ ಸೂಪರ್ 8 ಹಂತದಲ್ಲಿ ಗುಡುಗಿದ್ದರು. ಇದೆಲ್ಲದಕ್ಕಿಂತ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಸೂರ್ಯ ಹಿಡಿಯದಿದ್ದರೇ, ಬಹುಶಃ ಟೀಂ ಇಂಡಿಯಾ ರನ್ನರ್‌ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಿತ್ತೇನೋ

8. ಆರ್ಶದೀಪ್ ಸಿಂಗ್: 

ಎಡಗೈ ವೇಗಿ ಆರ್ಶದೀಪ್ ಸಿಂಗ್ 17 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದುಕೊಂಡಿದ್ದರು. ಸೆಮಿಫೈನಲ್ ಹೊರತುಪಡಿಸಿ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ವಿಕೆಟ್ ಬೇಟೆ ಆಡುವಲ್ಲಿ ಆರ್ಶದೀಪ್ ಸಿಂಗ್ ಯಶಸ್ವಿಯಾದರು.

ಅದರಲ್ಲೂ ಫೈನಲ್‌ ಪಂದ್ಯದಲ್ಲಿ ಆರ್ಶದೀಪ್ ಸಿಂಗ್ 19ನೇ ಓವರ್‌ನಲ್ಲಿ ಕೇವಲ 4 ರನ್ ನೀಡುವ ಮೂಲಕ ಹರಿಣಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರಿಂದಲೇ ಪಂದ್ಯ ಟೀಂ ಇಂಡಿಯಾ ಪರ ವಾಲುವಂತೆ ಮಾಡಿತು.

ಈಗ ಹೇಳಿ ಈ 8 ಆಟಗಾರರ ಪೈಕಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಯಾರ ಪಾತ್ರ ಹೆಚ್ಚಿದೆ ಎಂದು. ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.