ಪುಣೆ(ಮಾ.28): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಕ್ರಿಕೆಟ್‌ ದಿಗ್ಗಜರಾದ ಆಡಂ ಗಿಲ್‌ಕ್ರಿಸ್ಟ್‌ ಹಾಗೂ ಮ್ಯಾಥ್ಯೂ ಹೇಡನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಆರಂಭವನ್ನೇ ಪಡೆದಿದೆ. ಮೊದಲ ವಿಕೆಟ್‌ಗೆ 14.4 ಓವರ್‌ಗಳಲ್ಲಿ 103 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಸ್ಟಾರ್ ಆರಂಭಿಕ ಜೋಡಿ ಎನಿಸಿಕೊಂಡಿದ್ದ ಆಡಂ ಗಿಲ್‌ಕ್ರಿಸ್ಟ್‌ ಹಾಗೂ ಮ್ಯಾಥ್ಯೂ ಹೇಡನ್‌ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.

ಹೌದು, ಏಕದಿನ ಕ್ರಿಕೆಟ್‌ನಲ್ಲಿ ಧವನ್‌-ರೋಹಿತ್‌ ಜೋಡಿ 17ನೇ ಶತಕದ ಜತೆಯಾಟವಾಡುವ ಮೂಲಕ ಗಿಲ್ಲಿ-ಹೇಡನ್‌(16 ಬಾರಿ ಶತಕದ ಜತೆಯಾಟ) ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. ಇದರ ಜತೆಗೆ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚುಬಾರಿ ಶತಕದ ಜತೆಯಾಟವಾಡಿದ ಎರಡನೇ ಆರಂಭಿಕ ಜೋಡಿ ಎನ್ನುವ ಗೌರವಕ್ಕೆ ಭಾಜನವಾಗಿದೆ. 

ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ಕೆ

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿಹೆಚ್ಚು ಶತಕದ ಜತೆಯಾಟವಾಡಿದ ಆರಂಭಿಕ ಜೋಡಿ ಎನ್ನುವ ದಾಖಲೆ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌-ಸೌರವ್‌ ಗಂಗೂಲಿ ಹೆಸರಿನಲ್ಲಿದೆ. ಸಚಿನ್‌-ಸೌರವ್ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ 21 ಬಾರಿ ಶತಕದ ಜತೆಯಾಟವಾಡಿದೆ. 

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಶತಕದ ಜತೆಯಾಟವಾಡಿದ ಟಾಪ್‌ 4 ಆರಂಭಿಕ ಜೋಡಿ ವಿವರ ಇಲ್ಲಿದೆ ನೋಡಿ

21 ತೆಂಡುಲ್ಕರ್‌ - ಗಂಗೂಲಿ
17 ರೋಹಿತ್ - ಧವನ್
16 ಗಿಲ್‌ಕ್ರಿಸ್ಟ್ - ಹೇಡನ್
15 ಗ್ರೀನಿಡ್ಜ್‌ - ಹೈನ್ಸ್‌