ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಲ್ಲಿ ಬಿ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ. ಇದರಿಂದಾಗಿ ಇವರ ವಾರ್ಷಿಕ ಸಂಬಳ 3 ಕೋಟಿ ರೂಪಾಯಿಗೆ ಇಳಿಕೆಯಾಗಿದ್ದು, ಗಿಲ್ ಮತ್ತು ಬುಮ್ರಾಗಿಂತ ಕಡಿಮೆಯಾಗಿದೆ. ಸದ್ಯ ಇವರು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದು, ಪ್ರತಿ ಪಂದ್ಯಕ್ಕೆ 6 ಲಕ್ಷ ರೂ. ಪಡೆಯುತ್ತಾರೆ.
ಬೆಂಗಳೂರು: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ನ ದಿಗ್ಗಜ ಆಟಗಾರರಾಗಿದ್ದಾರೆ. ಇದೀಗ ಈ ಇಬ್ಬರು ಕ್ರಿಕೆಟಿಗರು ನಿವೃತ್ತಿಯ ಹೊಸ್ತಿಲಲ್ಲಿದ್ದು, ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ರೋ-ಕೊ ಜೋಡಿ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಕ್ರಿಕೆಟಿಗರು ಇದೀಗ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.
ಈಗಾಗಲೇ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವುದರಿಂದ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ವಿಚಾರಕ್ಕೆ ಬರುವುದಾದರೇ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಸಂಬಳವು ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗಿಂತಲೂ ಕಡಿಮೆಯಿದೆ. ಆದರೆ ರೋ-ಕೊ ಜೋಡಿ ತಮ್ಮದೇ ಆದ ಬ್ಯುಸಿನೆಸ್ ಮೂಲಗಳಿಂದ, ಬ್ರ್ಯಾಂಡ್ ಎಂಡೋರ್ಸ್ಮೆಂಟ್ಗಳ ಮೂಲಕ ಪ್ರತಿವರ್ಷವೂ ಕೋಟಿ ಕೋಟಿ ಆದಾಯವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.
ಬಿಸಿಸಿಐನಿಂದ ರೋಹಿತ್-ಕೊಹ್ಲಿಗೆ ವಾರ್ಷಿಕ 3 ಕೋಟಿ ರುಪಾಯಿ ಸಂಬಳ:
2026-27ನೇ ಸಾಲಿನ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪರಿಷ್ಕರಿಸಲಾಗಿದ್ದು ಇದುವರೆಗೂ ಎ+ ಗ್ರೇಡ್ ಹೊಂದಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿ ಗ್ರೇಡ್ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಕೆ ಎಲ್ ರಾಹುಲ್ ಹಾಗೂ ವಾಷಿಂಗ್ಟನ್ ಸುಂದರ್ ಜತೆಗೆ ಕೊಹ್ಲಿ ಹಾಗೂ ರೋಹಿತ್ ಕೂಡಾ ಬಿಸಿಸಿಐನಿಂದ ವಾರ್ಷಿಕ 3 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಪ್ರತಿ ಮ್ಯಾಚ್ಗೆ ರೋ-ಕೊ ಜೋಡಿಗೆ ಸಿಗುವ ಮ್ಯಾಚ್ ಫೀ ಎಷ್ಟು?
ಬಿಸಿಸಿಐ ಪ್ರಕಾರ, ಒಂದು ಟೆಸ್ಟ್ ಮ್ಯಾಚ್ ಆಡುವ ಆಟಗಾರನಿಗೆ 15 ಲಕ್ಷ ರುಪಾಯಿ, ಒಂದು ಏಕದಿನ ಪಂದ್ಯ ಆಡಿದ್ದಕ್ಕೆ 6 ಲಕ್ಷ ರುಪಾಯಿ ಹಾಗೂ ಒಂದು ಟಿ20 ಪಂದ್ಯ ಆಡಿದರೆ 3 ಲಕ್ಷ ರುಪಾಯಿ ಮ್ಯಾಚ್ ಫೀ ಪಡೆಯುತ್ತಾರೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೇವಲ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿರುವುದರಿಂದ ಪ್ರತಿ ಪಂದ್ಯಕ್ಕೆ 6 ಲಕ್ಷ ರುಪಾಯಿ ಮ್ಯಾಚ್ ಫೀ ಜೇಬಿಗಿಳಿಸಿಕೊಳ್ಳುತ್ತಾರೆ.


