ದುಬೈ(ಜ.28): ಅಭಿಮಾನಿಗಳು ನಿರಂತರವಾಗಿ ಕ್ರಿಕೆಟ್‌ನೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹೊಸ ಯೋಜನೆ ತಂದಿದೆ. ವರ್ಷದ ಕ್ರಿಕೆಟಿಗ, ದಶಕದ ಕ್ರಿಕೆಟಿಗ ಮಾದರಿಯಲ್ಲಿ ಇದೀಗ ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಈ ಪ್ರಶಸ್ತಿ ಸಿಗಲಿದೆ.

ಬುಧವಾರ ಈ ವಿಚಾರವನ್ನು ಬಹಿರಂಗಪಡಿಸಿದ ಐಸಿಸಿ, ಮೊದಲ ತಿಂಗಳು ಪ್ರಶಸ್ತಿ ರೇಸ್‌ನಲ್ಲಿ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಆಸ್ಪ್ರೇಲಿಯಾ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆರ್‌.ಅಶ್ವಿನ್‌, ರಿಷಭ್‌ ಪಂತ್‌, ಮೊಹಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಟಿ.ನಟರಾಜನ್‌ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಇವರ ಜೊತೆ ಇಂಗ್ಲೆಂಡ್‌ ನಾಯಕ ಜೋ ರೂಟ್‌, ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌, ಆಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್‌, ದ.ಆಫ್ರಿಕಾದ ಮಹಿಳಾ ಕ್ರಿಕೆಟಗರ್‌ಗಳಾದ ಮಾರಿಯಾನೆ ಕಾಪ್‌, ನದೀನೆ ಡಿ ಕ್ಲೆರ್ಕ್, ಪಾಕಿಸ್ತಾನದ ನಿದಾ ದರ್‌ ಸಹ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಆಟಗಾರ ಹರಾಜು ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಆಯ್ಕೆ ಹೇಗೆ?: 

ಪ್ರತಿ ತಿಂಗಳು ಅಭಿಮಾನಿಗಳು ಐಸಿಸಿ ವೆಬ್‌ಸೈಟ್‌ನಲ್ಲಿ ವೋಟಿಂಗ್‌ ನಡೆಸಬಹುದಾಗಿದೆ. ಇದರ ಜೊತೆಗೆ ವಿವಿಧ ದೇಶಗಳ ಮಾಜಿ ಕ್ರಿಕೆಟಿಗರು, ಪ್ರಸಾರಕರು ಹಾಗೂ ಪತ್ರಕರ್ತರನ್ನು ಒಳಗೊಂಡ ಸಮಿತಿಯೊಂದು ಸಹ ವೋಟಿಂಗ್‌ ನಡೆಸಲಿದೆ. ಸಮಿತಿ ನಡೆಸಿದ ವೋಟಿಂಗ್‌ನ ಶೇ.90ರಷ್ಟು, ಅಭಿಮಾನಿಗಳು ನಡೆಸಿದ ವೋಟಿಂಗ್‌ನ ಶೇ.10ರಷ್ಟನ್ನು ಒಟ್ಟುಗೂಡಿಸಿ ವಿಜೇತರನ್ನು ಘೋಷಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಪ್ರತಿ ತಿಂಗಳ ಮೊದಲ ದಿನದಿಂದ ಕೊನೆ ದಿನದ ವರೆಗೂ ನಡೆದ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಪರಿಗಣಿಸಿ ಐಸಿಸಿ ಸಮಿತಿ ನಾಮನಿರ್ದೇಶನ ಮಾಡುತ್ತದೆ. ಪ್ರತಿ ತಿಂಗಳ 2ನೇ ಸೋಮವಾರ ವಿಜೇತರನ್ನು ಐಸಿಸಿ ಘೋಷಿಸಲಿದೆ.