ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಆಟಗಾರ ಹರಾಜು ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಬೆಂಗಳೂರು: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಭರದ ಸಿದ್ದತೆ ಮಾಡಿಕೊಳ್ಳುತ್ತಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆಯುವ ಆಟಗಾರ ಹರಾಜು ಎಲ್ಲಿ? ಯಾವಾಗ ನಡೆಯಲಿದೆ ಎನ್ನುವ ಕುತೂಹಲಕ್ಕೆ ಬಿಸಿಸಿಐ ತೆರೆ ಎಳೆದಿದೆ.
2020ನೇ ಸಾಲಿನ ಐಪಿಎಲ್ ಟೂರ್ನಿಯು ಯುಎಇನಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಯಶಸ್ವಿಯಾಗಿ ನಡೆದಿತ್ತು. ಇದಾಗಿ ಮೂರ್ನಾಲ್ಕು ತಿಂಗಳು ಕಳೆಯುವಷ್ಟರಲ್ಲೇ ಮತ್ತೊಂದು ಐಪಿಎಲ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಸಜ್ಜಾಗಿದ್ದು, ಇದರ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ನಡೆಸಲು ವೇದಿಕೆ ರೆಡಿಯಾಗಿದೆ.
ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಳ್ಳಲು ಹಾಗೂ ಬೇಡವಾದ ಆಟಗಾರರನ್ನು ರಿಲೀಸ್ ಮಾಡಲು ಬಿಸಿಸಿಐ ಜನವರಿ 20ರಂದು ಡೆಡ್‌ಲೈನ್ ನೀಡಿತ್ತು.
ಇದರಂತೆ ಸನ್‌ರೈಸರ್ಸ್ ಹೈದರಾಬಾದ್ 22, ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಹೀಗೆ ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ.
ಇದೀಗ ಫೆಬ್ರವರಿ 18ರಂದು 2021ನೇ ಸಾಲಿನ ಐಪಿಎಲ್ ಆಟಗಾರರ ಹರಾಜು ಚೆನ್ನೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಖಚಿತ ಪಡಿಸಿದೆ.
ಸೆಂಟ್ರಲ್ ಕಾಂಟ್ರ್ಯಾಕ್ಟ್ ಹೊಂದಿರದ ಭಾರತೀಯ ಆಟಗಾರರು ಐಪಿಎಲ್ ಹರಾಜಿನಲ್ಲಿ ಭಾಗವಹಿಸಬೇಕಿದ್ದರೆ, ಹರಾಜಿನ ಒಪ್ಪಂದಗಳಿಗೆ ಸಹಿ ಹಾಕಿ ಆನ್‌ಲೈನ್‌ನಲ್ಲಿ ಫೆಬ್ರವರಿ 04ನೇ ತಾರೀಕಿನ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.
ಕಳೆದ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಕೋಲ್ಕತದಲ್ಲಿ ನಡೆದಿತ್ತು. ಇದೀಗ ಈ ಬಾರಿಯ ಹರಾಜಿಗೆ ಚೆನ್ನೈ ಆತಿಥ್ಯವನ್ನು ವಹಿಸಿದೆ.
ಈ ಮಿನಿ ಹರಾಜಿನಲ್ಲಿ ಎಲ್ಲಾ 8 ಫ್ರಾಂಚೈಸಿಗಳು ಒಟ್ಟು 61 ಆಟಗಾರರನ್ನು ಖರೀದಿಸಬಹುದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅತಿ ಹೆಚ್ಚು ಅಂದರೆ 13 ಆಟಗಾರರನ್ನು ಖರೀದಿಸಲು ಅವಕಾಶವಿದೆ.
ಯಾವ ತಂಡದ ಬಳಿ ಎಷ್ಟೆಷ್ಟು ಹಣ ಬಾಕಿ ಉಳಿದಿದೆ ಎನ್ನುವುದನ್ನು ನೋಡುವುದಾದರೆ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿಯಿದೆ 35.7 ಕೋಟಿ ರುಪಾಯಿ
ರಾಜಸ್ಥಾನ ರಾಯಲ್ಸ್ ಬಳಿಯಿದೆ 35.85 ಕೋಟಿ ರುಪಾಯಿ
ಕಿಂಗ್ಸ್ ಇಲೆವನ್ ಪಂಜಾಬ್ ಬಳಿಯಿದೆ ಬರೋಬ್ಬರಿ 53.2 ಕೋಟಿ ರುಪಾಯಿ
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಿ ಇದೆ 15.35 ಕೋಟಿ ರುಪಾಯಿ.
ಅತಿಹೆಚ್ಚು ಆಟಗಾರರನ್ನು ಉಳಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಬಳಿ ಇದೆ ಕೇವಲ 10.75 ಕೋಟಿ ರುಪಾಯಿ
2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ಬಳಿ ಇದೆ 10.85 ಕೋಟಿ ರುಪಾಯಿ
ಇನ್ನು ಕಳೆದ ಆವೃತ್ತಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಬಳಿ ಕೇವಲ 9 ಕೋಟಿ ರುಪಾಯಿ ಹಣವಿದೆ.