ರಿಷಭ್ ಪಂತ್ ಆರೋಗ್ಯದಲ್ಲಿ ಗಣನೀಯ ಚೇತರಿಕೆಇನ್ನೊಂದು ವಾರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಸಂಪೂರ್ಣವಾಗಿ ಗುಣಮುಖರಾಗಲು ಸುಮಾರು 8-9 ತಿಂಗಳು ಬೇಕಾಗಬಹುದು

ಮುಂಬೈ(ಜ.31): ಕಳೆದ ತಿಂಗಳು ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇದೇ ವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೊದಲು ಡೆಹರಾಡೂನ್‌ನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದ ರಿಷಭ್‌ರನ್ನು ಬಳಿಕ ಮುಂಬೈಗೆ ಏರ್‌ಲಿಫ್ಟ್‌ ಮಾಡಿ, ಅಲ್ಲೇ ಬಲಗಾಲಿನ ಮಂಡಿಯ ಅಸ್ತಿಬಂಧಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. 

ಸದ್ಯ ಆರೋಗ್ಯ ಚೇತರಿಕೆ ಕಂಡುಬಂದಿದ್ದರಿಂದ ಮನೆಗೆ ವಾಪಸಾಗಲಿದ್ದು, ಮುಂದಿನ ತಿಂಗಳು ಮತ್ತೆ ಆಸ್ಪತ್ರೆಗೆ ದಾಖಲಾಗಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಪೂರ್ಣವಾಗಿ ಗುಣಮುಖರಾಗಲು ಸುಮಾರು 8-9 ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.

ಅಂಡರ್-19 ವಿಶ್ವಕಪ್‌ನ ಶ್ರೇಷ್ಠ ತಂಡದಲ್ಲಿ ಶಫಾಲಿ, ಶ್ವೇತಾ

ದುಬೈ: ಐಸಿಸಿ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನ ಟೂರ್ನಿಯ ಶ್ರೇಷ್ಠ ತಂಡದಲ್ಲಿ ಚಾಂಪಿಯನ್‌ ಭಾರತದ ನಾಯಕಿ ಶಫಾಲಿ ವರ್ಮಾ ಸೇರಿದಂತೆ ಮೂವರು ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಶ್ವೇತಾ ಸೆಹ್ರಾವತ್‌(297 ರನ್‌), 11 ವಿಕೆಟ್‌ ಕಬಳಿಸಿದ್ದ ಸ್ಪಿನ್ನರ್‌ ಪಾರ್ಶವಿ ಚೋಪ್ರಾ ಕೂಡಾ ತಂಡದಲ್ಲಿದ್ದಾರೆ. ಇಂಗ್ಲೆಂಡ್‌ನ ಗ್ರೇಸ್‌ ಸ್ಕ್ರೀವೆನ್ಸ್‌ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತ್ರಿಕೋನ ಟಿ20: ವಿಂಡೀಸ್‌ ವಿರುದ್ಧ ಭಾರತಕ್ಕೆ ಗೆಲುವು

ಈಸ್ಟ್‌ಲಂಡನ್‌: ತ್ರಿಕೋನ ಟಿ20 ಸರಣಿಯ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಭಾರತ ಮಹಿಳಾ ತಂಡ ವೆಸ್ಟ್‌ಇಂಡೀಸ್‌ ವಿರುದ್ಧ 8 ವಿಕೆಟ್‌ ಗೆಲುವು ಸಾಧಿಸಿದ್ದು, ಅಜೇಯವಾಗಿಯೇ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 6 ವಿಕೆಟ್‌ಗೆ 94 ರನ ಕಲೆಹಾಕಿತು. ದೀಪ್ತಿ ಶರ್ಮಾ 3 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಭಾರತ 13.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಜೆಮಿಮಾ ರೋಡ್ರಿಗಸ್‌(ಔಟಾಗದೆ 42), ಹರ್ಮನ್‌ಪ್ರೀತ್‌(32) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುರುವಾರ ಭಾರತ-ದ.ಆಫ್ರಿಕಾ ನಡುವೆ ಫೈನಲ್‌ ಪಂದ್ಯ ನಡೆಯಲಿದೆ.

ಟೆಸ್ಟ್‌: ಆಸೀಸ್‌ ಸ್ಪಿನ್ನ​ರ್‌ಗಳ ಅಭ್ಯಾಸಕ್ಕೆ ವಿಶೇಷ ಪಿಚ್‌

ಸಿಡ್ನಿ: ಭಾರತ ವಿರುದ್ಧ ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ 4 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗಾಗಿ ಆಸ್ಪ್ರೇಲಿಯಾ ತಂಡ ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದು, ಅದಕ್ಕೂ ಮುನ್ನ ಸಿಡ್ನಿಯಲ್ಲಿ ವಿಶೇಷವಾಗಿ ತಯಾರಿಸಲಾದ ಸ್ಪಿನ್‌ ಸ್ನೇಹಿ ಪಿಚ್‌ಗಳಲ್ಲಿ ಅಭ್ಯಾಸ ನಡೆಸಲಿದೆ. 

Ranji Trophy ಇಂದಿನಿಂದ ಕರ್ನಾಟಕ-ಉತ್ತರಾಖಂಡ ಕ್ವಾರ್ಟರ್ ಫೈನಲ್ ಕದನ

2 ಪಿಚ್‌ಗಳಲ್ಲಿ ಆಟಗಾರರು 2 ದಿನ ಅಭ್ಯಾಸ ನಡೆಸಲಿದ್ದು, ಬಳಿಕ ಬೆಂಗಳೂರಿಗೆ ಆಗಮಿಸಿ ಇಲ್ಲಿ 2-3 ದಿನಗಳ ಕಾಲ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದೆ. ಭಾರತದಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ಗಳಿರುವ ಕಾರಣ ಆಸೀಸ್‌ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡದ ಟಾಡ್‌ ಮುರ್ಫಿ ಸೇರಿದಂತೆ ನಾಲ್ವರು ಸ್ಪಿನ್ನರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಿದೆ. ಬೆಂಗಳೂರಿನಲ್ಲಿ ಸ್ಪಿನ್ನ​ರ್‌ಗಳಿಗೆ ಸಹಕಾರಿಯಾಗುವಂತೆ ಪಿಚ್‌ ತಯಾರಿಸಲು ಬಿಸಿಸಿಐಗೆ ಮನವಿಯನ್ನೂ ಮಾಡಿದೆ ಎನ್ನಲಾಗಿದೆ.

197 ಬಾಲಲ್ಲಿ 471 ರನ್‌ ಸಿಡಿಸಿದ ಬೆಂಗ್ಳೂರಿನ ಶಿವು

ಬೆಂಗಳೂರು: ಅಂಡರ್‌-14 ಮಕ್ಕಳಿಗೆ ಕೆಎಸ್‌ಸಿಯ ಆಯೋಜಿಸುತ್ತಿರುವ ಬಿಟಿಆರ್‌ ಶೀಲ್ಡ್‌ ಪಂದ್ಯದಲ್ಲಿ ಬೆಂಗಳೂರಿನ ಗಿರಿಧಾನ್ವ ಶಾಲೆಯ ಶಿವು ಎಂ. ಬರೋಬ್ಬರಿ 471 ರನ್‌ ಸಿಡಿಸಿ ಗಮನ ಸೆಳೆದಿದ್ದಾರೆ. ಜೈನ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಸ್ಕೂಲ್‌ ವಿರುದ್ಧದ ಪಂದ್ಯದಲ್ಲಿ ಶಿವು 197 ಎಸೆತಗಳಲ್ಲಿ 86 ಬೌಂಡರಿ, 1 ಸಿಕ್ಸರ್‌ ಒಳಗೊಂಡ 471 ರನ್‌ ಚಚ್ಚಿ ಔಟಾಗದೆ ಉಳಿದರು. ಗಿರಿಧಾನ್ವ ಶಾಲೆ 50 ಓವರಲ್ಲಿ 4 ವಿಕೆಟ್‌ಗೆ 595 ರನ್‌ ಕಲೆಹಾಕಿತು. ಜೈನ್‌ ಶಾಲೆ 41.3 ಓವರಲ್ಲಿ 181 ರನ್‌ಗೆ ಅಲೌಟಾಗಿ 414 ರನ್‌ಗಳಿಂದ ಸೋಲನುಭವಿಸಿತು.