Ranji Trophy ಇಂದಿನಿಂದ ಕರ್ನಾಟಕ-ಉತ್ತರಾಖಂಡ ಕ್ವಾರ್ಟರ್ ಫೈನಲ್ ಕದನ
ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಉತ್ತರಾಖಂಡ್ ಸವಾಲು
ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ
8 ಬಾರಿಯ ಚಾಂಪಿಯನ್ ಕರ್ನಾಟಕಕ್ಕೆ ಮತ್ತೊಂದು ಗೆಲುವಿನ ನಿರೀಕ್ಷೆ

ಬೆಂಗಳೂರು(ಜ.31): 2022-23ರ ಋುತುವಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ವೇದಿಕೆ ಸಜ್ಜುಗೊಂಡಿದ್ದು, 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ಉತ್ತರಾಖಂಡ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಋುತುವಿನಲ್ಲಿ ರಾಜ್ಯ ತಂಡ ಚಿನ್ನಸ್ವಾಮಿ ಕ್ರೀಡಾಂಗಣ, ಆಲೂರು ಕ್ರೀಡಾಂಗಣಗಳಲ್ಲಿ ಒಟ್ಟಾರೆ 4 ಪಂದ್ಯಗಳನ್ನಾಡಿ 3ರಲ್ಲಿ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ತವರಿನ ಅಂಗಳದ ಲಾಭವೆತ್ತಲು ಎದುರು ನೋಡುತ್ತಿದೆ.
ಎಲೈಟ್ ‘ಸಿ’ ಗುಂಪಿನಲ್ಲಿದ್ದ ಕರ್ನಾಟಕ ಒಟ್ಟು 35 ಅಂಕಗಳೊಂದಿಗೆ ಅಗ್ರಸ್ಥಾನಿಯೇ ನಾಕೌಟ್ ಪ್ರವೇಶಿಸಿತ್ತು. 4 ಪಂದ್ಯಗಳನ್ನು ಗೆದ್ದಿದ್ದ ರಾಜ್ಯ ತಂಡ ಉಳಿದ 3 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಕೊನೆ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದು ಅಗ್ರಸ್ಥಾನ ಭದ್ರಪಡಿಸಿಕೊಂಡಿತ್ತು. ಮತ್ತೊಂದೆಡೆ ಉತ್ತರಾಖಂಡ ಎಲೈಟ್ ‘ಎ’ ಗುಂಪಿನಲ್ಲಿ 3 ಗೆಲುವು, 4 ಡ್ರಾದೊಂದಿಗೆ 29 ಅಂಕಗಳನ್ನು ಸಂಪಾದಿಸಿ 2ನೇ ಸ್ಥಾನ ಪಡೆದಿತ್ತು.
ನಾಕೌಟ್ ಪಂದ್ಯಕ್ಕೆ ಈಗಾಗಲೇ ರಾಜ್ಯ ತಂಡ ಪ್ರಕಟಗೊಂಡಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಈ ಋುತುವಿನಲ್ಲಿ 500ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ನಾಯಕ ಮಯಾಂಕ್ ಅಗರ್‌ವಾಲ್, ಆರ್.ಸಮಥ್‌ರ್ ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದು, ಅನುಭವಿ ಆಟಗಾರರಾದ ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಕೂಡಾ ಬಲ ಒದಗಿಸಲಿದ್ದಾರೆ. ಶ್ರೀನಿವಾಸ್ ಶರತ್, ಯುವ ಬ್ಯಾಟರ್ ನಿಕಿನ್ ಜೋಸ್ ಕೂಡಾ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ವೇಗಿಗಳಾದ ವಿಜಯ್‌ಕುಮಾರ್ ವೈಶಾಖ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ ಜೊತೆಗೆ ಸ್ಪಿನ್ ಜೋಡಿ ಕೆ.ಗೌತಮ್, ಶ್ರೇಯಸ್ ಗೋಪಾಲ್ ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ಮಿಂಚು ಹರಿಸುತ್ತಿದ್ದಾರೆ. ತವರಿನ ಅಂಗಳದಲ್ಲಿ ಕರ್ನಾಟಕ ಬೌಲರ್‌ಗಳು ಮತ್ತೊಮ್ಮೆ ಅಬ್ಬರಿಸುವ ನಿರೀಕ್ಷೆಯಲ್ಲಿದ್ದು, ಉತ್ತರಾಖಂಡ ಬ್ಯಾಟರ್‌ಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
Murali Vijay: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಘೋಷಿಸಿದ ಟೀಂ ಇಂಡಿಯಾ ಕ್ರಿಕೆಟಿಗ..!
ಪಂದ್ಯ: ಬೆಳಗ್ಗೆ 9.30ಕ್ಕೆ
ಕರ್ನಾಟಕ - ಉತ್ತರಾಖಂಡ ಮೊದಲ ಮುಖಾಮುಖಿ
ರಣಜಿ ಟ್ರೋಫಿ ಇತಿಹಾಸದಲ್ಲೇ ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಈ ಎರಡೂ ತಂಡಗಳು ಕಳೆದ ಋುತುವಿನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.
ಮಕ್ಕಳಿಗೆ ಮೈದಾನ ಪ್ರವೇಶಕ್ಕೆ ಅವಕಾಶ: ಕರ್ನಾಟಕ-ಉತ್ತರಾಖಂಡ ನಡುವಿನ ಪಂದ್ಯಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಿದೆ. ಜೊತೆಗೆ ವಿವಿಧ ಶಾಲೆಗಳ ಮಕ್ಕಳಿಗೂ ಪಂದ್ಯ ವೀಕ್ಷಣೆಗೆ ವಿಶೇಷ ಆಹ್ವಾನ ನೀಡಿದೆ.
ಮಧ್ಯಪ್ರದೇಶ- ಆಂಧ್ರ ಫೈಟ್
ರಣಜಿ ಟ್ರೋಫಿಯ ಮತ್ತೊಂದು ಕ್ವಾರ್ಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮಧ್ಯಪ್ರದೇಶ ತಂಡ ಆಂಧ್ರಪ್ರದೇಶ ವಿರುದ್ಧ ಸೆಣಸಾಡಲಿದೆ. ಮ.ಪ್ರ. ‘ಡಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಆಂಧ್ರ ‘ಬಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿತ್ತು. ಈ ಪಂದ್ಯಕ್ಕೆ ಇಂದೋರ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಕೋಲ್ಕತಾದಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಬಂಗಾಳ ಹಾಗೂ ‘ಸಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಜಾರ್ಖಂಡ್ ಮುಖಾಮುಖಿಯಾಗಲಿವೆ. ಮತ್ತೊಂದು ಕ್ವಾರ್ಟರ್‌ನಲ್ಲಿ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದ್ದ 2019-20ರ ಚಾಂಪಿಯನ್ ಸೌರಾಷ್ಟ್ರ ತಂಡ ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಪಂಜಾಬ್ ವಿರುದ್ಧ ಆಡಲಿದೆ. ರಾಜ್‌ಕೋಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಕ್ವಾರ್ಟರ್ ಫೈನಲ್ ಪಂದ್ಯಗಳು
ಪಂದ್ಯ ಸ್ಥಳ
ಬಂಗಾಳ-ಜಾರ್ಖಂಡ್ ಕೋಲ್ಕತಾ
ಸೌರಾಷ್ಟ್ರ-ಪಂಜಾಬ್ ರಾಜ್‌ಕೋಟ್
ಕರ್ನಾಟಕ-ಉತ್ತರಾಖಂಡ ಬೆಂಗಳೂರು
ಮಧ್ಯಪ್ರದೇಶ-ಆಂಧ್ರ ಇಂದೋರ್