ಸಿಡ್ನಿಯಲ್ಲಿ ಗುಡುಗಿದ ರಿಷಭ್ ಪಂತ್; ರೋಚಕಘಟ್ಟದಲ್ಲಿ ಭಾರತ-ಆಸೀಸ್ ಕೊನೆಯ ಟೆಸ್ಟ್!
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 181 ರನ್‌ಗಳಿಗೆ ಆಲೌಟ್ ಮಾಡಿ, ಭಾರತ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದೆ. ರಿಷಭ್ ಪಂತ್ ಸ್ಪೋಟಕ ಅರ್ಧಶತಕ ಸಿಡಿಸಿದರು. ಮೂರನೇ ದಿನಕ್ಕೆ ಭಾರತ 145 ರನ್‌ಗಳ ಮುನ್ನಡೆ ಸಾಧಿಸಿದೆ.
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯವು ರೋಚಕ ಘಟ್ಟ ತಲುಪಿದೆ. ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 181 ರನ್‌ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ. ಈ ಮೂಲಕ ಒಟ್ಟಾರೆ 145 ರನ್‌ಗಳ ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ(8) ಹಾಗೂ ವಾಷಿಂಗ್ಟನ್ ಸುಂದರ್(6) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಾಟದಲ್ಲಿ ರಿಷಭ್ ಪಂತ್ ಸ್ಪೋಟಕ ಅರ್ಧಶತಕ ಹೆಚ್ಚು ಗಮನ ಸೆಳೆಯಿತು.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡವನ್ನು 181 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಟೀಂ ಇಂಡಿಯಾ 4 ರನ್ ಅಮೂಲ್ಯ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೆ 4 ಬೌಂಡರಿ ಬಾರಿಸುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಡುವ ಸೂಚನೆ ನೀಡಿದರು. ಕೆ ಎಲ್ ರಾಹುಲ್ ಹಾಗೂ ಜೈಸ್ವಾಲ್ ಮೊದಲ ವಿಕೆಟ್‌ಗೆ 42 ರನ್‌ಗಳ ಜತೆಯಾಟ ಒದಗಿಸಿಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ಕಾಟ್ ಬೊಲೆಂಡ್ ಯಶಸ್ವಿಯಾದರು. ಕೆ ಎಲ್ ರಾಹುಲ್ 10 ಹಾಗೂ ಜೈಸ್ವಾಲ್ 22 ರನ್ ಗಳಿಸಿ ಬೊಲೆಂಡ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು ವಿರಾಟ್ ಕೊಹ್ಲಿ ಮತ್ತೊಮ್ಮೆ ಹೊರಹೋಗುವ ಚೆಂಡನ್ನು ಕೆಣಕಲು ಹೋಗಿ ಬೊಲೆಂಡ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಶುಭ್‌ಮನ್ ಗಿಲ್ ಬ್ಯಾಟಿಂಗ್ 13 ರನ್‌ಗಳಿಗೆ ಸೀಮಿತವಾಯಿತು.
'ನನಗೂ ಬುದ್ದಿಯಿದೆ': ನಿವೃತ್ತಿ ವದಂತಿ ಬೆನ್ನಲ್ಲೇ ಖಡಕ್ ಸಂದೇಶ ರವಾನಿಸಿದ ರೋಹಿತ್ ಶರ್ಮಾ!
ಗುಡುಗಿದ ಪಂತ್: ಕೇವಲ 78 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಟೀಂ ಇಂಡಿಯಾಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಸರೆಯಾದರು. ತಾವೆದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಆಸೀಸ್‌ಗೆ ಎಚ್ಚರಿಕೆ ರವಾನಿಸಿದ ಪಂತ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆಸೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಪಂತ್ ಕೇವಲ 33 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಗಳಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ಇದೀಗ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದು, ಮೂರನೇ ದಿನದಾಟದಲ್ಲಿ ಒಂದು ದೊಡ್ಡ ಜತೆಯಾಟ ಮೂಡಿಬಂದರೆ ಸಿಡ್ನಿ ಟೆಸ್ಟ್ ಮೇಲೆ ಭಾರತ ಹಿಡಿತ ಸಾಧಿಸಲು ಸಾಧ್ಯವಾಗಲಿದೆ.
ಸಿಡ್ನಿ ಟೆಸ್ಟ್ ಪಂದ್ಯದ ಮಧ್ಯೆ ಬುಮ್ರಾಗೆ ಪೆಟ್ಟು! ಆಸ್ಪತ್ರೆಗೆ ದೌಡಾಯಿಸಿದ ವೇಗಿ, ಕೊಹ್ಲಿ ಹೆಗಲೇರಿದ ನಾಯಕ ಪಟ್ಟ
ಇನ್ನು ಇದಕ್ಕೂ ಮೊದಲು ಒಂದು ವಿಕೆಟ್ ಕಳೆದುಕೊಂಡು 9 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಆಸ್ಟ್ರೇಲಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ನಿತೀಶ್ ರೆಡ್ಡಿ ಮಾರಕ ದಾಳಿಗೆ ತತ್ತರಿಸಿ ಕೇವಲ 181 ರನ್‌ಗಳಿಗೆ ಸರ್ವಪತನ ಕಂಡಿತು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ವೆಬ್‌ಸ್ಟರ್ 57 ರನ್ ಸಿಡಿಸಿ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.