ದುಬೈ(ಫೆ.02): ಐಸಿಸಿ ಹೊಸದಾಗಿ ಪರಿಚಯಿಸಿದ ತಿಂಗಳ ಶ್ರೇಷ್ಠ ಕ್ರಿಕೆಟಿಗ ರೇಸ್‌ನಲ್ಲಿ ಈ ಬಾರಿ ಮೂವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಜನವರಿ ತಿಂಗಳಿನಲ್ಲಿ ಅದ್ಭುತ ಪ್ರದರ್ಶನ ತೋರಿದ ಮೂವರು ಕ್ರಿಕೆಟಿಗರನ್ನು ಐಸಿಸಿ ನಾಮನಿರ್ದೇಶನ ಮಾಡಿದೆ.

ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ ಹಾಗೂ ಐರ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಪೌಲ್ ಸ್ಟ್ರೆರ್ಲಿಂಗ್ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಇನ್ನು ಮಹಿಳಾ ಶ್ರೇಷ್ಠ ಆಟಗಾರ್ತಿ ರೇಸ್‌ನಲ್ಲಿ ಪಾಕಿಸ್ತಾನದ ಡಯಾನಾ ಬೇಗ್‌, ದಕ್ಷಿಣ ಆಫ್ರಿಕಾದ ಶಭ್‌ನಿಮ್‌ ಇಸ್ಮಿಲ್, ಮೆರಿಜಾನ್‌ ಕೆಂಪ್ ಐಸಿಸಿಯಿಂದ ನಾಮನಿರ್ದೇಶನಗೊಂಡಿದ್ದಾರೆ.

ರಿಷಭ್‌ ಪಂತ್ ಆಸ್ಟ್ರೇಲಿಯಾ ವಿರುದ್ದದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 97 ರನ್ ಹಾಗೂ 89 ರನ್‌ ಬಾರಿಸಿದ್ದರು. ಇನ್ನು ಜೋ ರೂಟ್‌ ಶ್ರೀಲಂಕಾ ವಿರುದ್ದ ಸರಣಿಯ ಎರಡು ಟೆಸ್ಟ್ ಪಂದ್ಯಗಳಲ್ಲಿ 228 ರನ್ ಹಾಗೂ 186 ರನ್‌ ಬಾರಿಸಿ ಸರಣಿ ಕ್ಲೀನ್‌ ಸ್ವೀಪ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಐರ್ಲೆಂಡ್‌ನ ಪೌಲ್‌ ಸ್ಟ್ರೆರ್ಲಿಂಗ್‌ ಯುಎಇ ವಿರುದ್ದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ 3 ಶತಕ ಬಾರಿಸಿ ಗಮನ ಸೆಳೆದಿದ್ದರು. 

ತಿಂಗಳ ಶ್ರೇಷ್ಠ ಕ್ರಿಕೆಟರ್: ಐಸಿಸಿಯಿಂದ ಹೊಸ ಪ್ರಶಸ್ತಿ..!

ಮಹಿಳಾ ಆಟಗಾರ್ತಿಯರ ವಿಭಾಗದಲ್ಲಿ ಪಾಕಿಸ್ತಾನದ ಡಯಾನಾ ಬೇಗ್‌ 3 ಪಂದ್ಯಗಳ ಏಕದಿನ ಸರಣಿಯಲ್ಲಿ 9 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇನ್ನು ದಕ್ಷಿಣ ಆಫ್ರಿಕಾದ ಶಭ್‌ನಿಮ್‌ ಇಸ್ಮಿಲ್ ಪಾಕಿಸ್ತಾನ ಪರ 3 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿ ಏಕದಿನ ಸರಣಿಯಲ್ಲಿ 7 ವಿಕೆಟ್ ಕಬಳಿಸಿದ್ದರು. ದಕ್ಷಿಣ ಆಫ್ರಿಕಾದ ಮತ್ತೋರ್ವ ಆಟಗಾರ್ತಿ ಮೆರಿಜಾನ್‌ ಕೆಂಪ್ 115 ರನ್‌ ಬಾರಿಸಿದ್ದಲ್ಲದೇ ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸಿದ್ದರು.