ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಭಾರತ ಮೊದಲ ದಿನ 4 ವಿಕೆಟ್‌ಗೆ 260 ರನ್‌ ಗಳಿಸಿದೆ. ರಿಷಭ್ ಪಂತ್‌ ಕಾಲಿಗೆ ಪೆಟ್ಟಾದ ಕಾರಣ ಮೈದಾನ ತೊರೆದರು. ಸಾಯಿ ಸುದರ್ಶನ್‌ ಟೆಸ್ಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು.

ಮ್ಯಾಂಚೆಸ್ಟರ್‌: ತೆಂಡುಲ್ಕರ್‌-ಆ್ಯಂಡರ್‌ಸನ್‌ ಟ್ರೋಫಿಯಲ್ಲಿ ಸರಣಿ ಸೋಲು ತಪ್ಪಿಸಿಕೊಳ್ಳುವ ಗುರಿ ಹೊಂದಿರುವ ಭಾರತ, ಬುಧವಾರ ಇಲ್ಲಿ ಆರಂಭಗೊಂಡ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಮೊದಲ ದಿನ ಗೌರವ ಮೊತ್ತ ದಾಖಲಿಸಿದೆ.

ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 260 ರನ್‌ ಕಲೆಹಾಕಿದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ಆದರೆ, ರಿವರ್ಸ್‌ ಸ್ವೀಪ್‌ ಮಾಡುವ ವೇಳೆ ಕಾಲಿಗೆ ಚೆಂಡು ಬಿದ್ದು, ಕಾಲು ಊದಿಕೊಂಡ ಕಾರಣ ಮೈದಾನ ತೊರೆದ ರಿಷಭ್‌ ಪಂತ್‌ರ ಫಿಟ್ನೆಸ್‌ ಬಗ್ಗೆ ಭಾರತಕ್ಕೆ ಆತಂಕ ಶುರುವಾಗಿದೆ.

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿತು. 3 ಬದಲಾವಣೆಗಳೊಂದಿಗೆ ಕಣಕ್ಕಿಳಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಹಾಗೂ ಕೆ.ಎಲ್‌.ರಾಹುಲ್‌ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ಅವಧಿಯಲ್ಲಿ ವಿಕೆಟ್‌ ನಷ್ಟವಿಲ್ಲದೆ 78 ರನ್‌ ಕಲೆಹಾಕಿತು.

ಭೋಜನ ವಿರಾಮ ಮುಗಿಸಿ ಬರುತ್ತಿದ್ದಂತೆ ರಾಹುಲ್‌ (46) ಔಟಾದರು. ಅರ್ಧಶತಕ (58) ಬಳಿಕ ಜೈಸ್ವಾಲ್‌ ಸಹ ವಿಕೆಟ್‌ ಕಳೆದುಕೊಂಡರು. ನಾಯಕ ಶುಭ್‌ಮನ್‌ ಗಿಲ್‌ 12 ರನ್‌ಗೆ ಔಟಾಗಿ ನಿರಾಸೆ ಅನುಭವಿಸಿದರು. 94ಕ್ಕೆ 0 ಯಿಂದ ಭಾರತ 140ಕ್ಕೆ 3 ವಿಕೆಟ್‌ಗೆ ಕುಸಿಯಿತು.

4ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ಸಾಯಿ ಸುದರ್ಶನ್‌ ಹಾಗೂ ರಿಷಭ್ ಪಂತ್‌ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ ತಂಡದ ಮೊತ್ತವನ್ನು 200 ರನ್‌ ದಾಟಿಸಿತು. ಆದರೆ ಇನ್ನಿಂಗ್ಸ್‌ನ 68ನೇ ಓವರಲ್ಲಿ ಭಾರತಕ್ಕೆ ಆಘಾತ ಎದುರಾಯಿತು. ವೋಕ್ಸ್‌ ಎಸೆತವನ್ನು ರಿವರ್ಸ್‌ ಸ್ವೀಪ್‌ ಮಾಡಲು ಯತ್ನಿಸಿದ ರಿಷಭ್ ಪಂತ್‌ರ ಕಾಲಗೆ ಚೆಂಡು ಬಡಿಯಿತು. ಕಾಲು ಊದಿಕೊಂಡು ನಿಲ್ಲಲು ಆಗದ ಸ್ಥಿತಿಯಲ್ಲಿದ್ದ ಪಂತ್‌ರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. 37 ರನ್‌ ಗಳಿಸಿರುವ ಪಂತ್‌ ಪಂದ್ಯದಲ್ಲಿ ಮತ್ತೆ ಬ್ಯಾಟ್‌ ಮಾಡಲಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

Scroll to load tweet…

20 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನದ ಲಾಭವೆತ್ತಿ, ಟೆಸ್ಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ ಸುದರ್ಶನ್‌, ಸ್ಟೋಕ್ಸ್‌ರ ಶಾರ್ಟ್‌ಪಿಚ್ಡ್‌ ಎಸೆತವನ್ನು ಪುಲ್‌ ಮಾಡಿ ಬೌಂಡರಿ ಗೆರೆಯಲ್ಲಿ ಕ್ಯಾಚ್ ನೀಡಿದರು. ಬಳಿಕ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್‌ ಠಾಕೂರ್ ಹೋರಾಟ ಮುಂದುವರಿಸಿ ತಂಡ ಮತ್ತೆ ಆಘಾತಕ್ಕೆ ಒಳಗಾಗದಂತೆ ಎಚ್ಚರ ವಹಿಸಿದರು. ಈ ಇಬ್ಬರು 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಭಾರತ ಮೊದಲ ದಿನದಂತ್ಯಕ್ಕೆ 82 ಓವರಲ್ಲಿ 260/4 (ಸುದರ್ಶನ್‌ 61, ಜೈಸ್ವಾಲ್‌ 58, ಸ್ಟೋಕ್ಸ್‌ 2-47)

ಮ್ಯಾಂಚೆಸ್ಟರ್‌ ಕ್ರೀಡಾಂಗಣದಲ್ಲಿ ಎಂಜಿನಿಯರ್‌ ಸ್ಟ್ಯಾಂಡ್‌ ಅನಾವರಣ

ಮ್ಯಾಂಚೆಸ್ಟರ್‌: ಭಾರತದ ಮಾಜಿ ವಿಕೆಟ್‌ ಕೀಪರ್‌ ಫಾರೊಕ್‌ ಎಂಜಿನಿಯರ್‌ ಹಾಗೂ ವೆಸ್ಟ್‌ಇಂಡೀಸ್‌ನ ದಿಗ್ಗಜ, ವಿಶ್ವಕಪ್‌ ವಿಜೇತ ನಾಯಕ ಕ್ಲೈವ್‌ ಲಾಯ್ಡ್‌ ಹೆಸರುಗಳನ್ನು ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲಾಗಿದ್ದು, ಅವುಗಳನ್ನು ಬುಧವಾರ ಅನಾವರಣಗೊಳಿಸಲಾಯಿತು. ತನ್ನ ತಂಡದ ಪರವಾಗಿ ಕೌಂಟಿ ಕ್ರಿಕೆಟ್‌ ಆಡಿದ ಈ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಲಂಕಾಶೈರ್‌ ಕ್ಲಬ್‌ ಈ ರೀತಿ ವಿಶೇಷ ಗೌರವ ಸೂಚಿಸಿದೆ. ಎಂಜಿನಿಯರ್‌ 1968ರಿಂದ 1976ರ ವರೆಗೂ ಲಂಕಾಶೈರ್‌ ಪರ 175 ಪಂದ್ಯಗಳನ್ನಾಡಿ 5942 ರನ್‌ ಗಳಿಸಿದ್ದರು. 429 ಕ್ಯಾಚ್‌, 35 ಸ್ಟಂಪಿಂಗ್‌ ಮಾಡಿದ್ದರು. ಇನ್ನು ಲಾಯ್ಡ್‌ 1970ರಿಂದ 2 ದಶಕ ಕಾಲ ಲಂಕಾಶೈರ್‌ ತಂಡವನ್ನು ಪ್ರತಿನಿಧಿಸಿದ್ದರು.