ತವರಿನಲ್ಲಿ ಸೋತಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಜ್ಜಾಗಿದೆ. ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಈ ಪಂದ್ಯ ನಿರ್ಣಾಯಕವಾಗಿದ್ದು, ಆರ್‌ಸಿಬಿ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಕನ್ನಡಿಗ ಕೆ.ಎಲ್. ರಾಹುಲ್ ಮೇಲೆ ಎಲ್ಲರ ಕಣ್ಣಿದೆ.

ನವದೆಹಲಿ: ಇತ್ತೀಚೆಗಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತಿದ್ದ ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಈಗ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ತಂಡ ಸೋಮವಾರ ಡೆಲ್ಲಿ ತಂಡವನ್ನು ಅದರದೇ ತವರಿನಲ್ಲಿ ಎದುರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 264 ರನ್‌ ಗಳಿಸಿದ ಹೊರತಾಗಿಯೂ ಸೋತಿತ್ತು. ಅದರ ಕಹಿಯನ್ನು ಮರೆತು ಗೆಲುವಿನ ಹಳಿಗೆ ಮರಳಲು ಡೆಲ್ಲಿ ಕಾಯುತ್ತಿದೆ.

Add Asianetnews Kannada as a Preferred SourcegooglePreferred

ಪ್ಲೇ-ಆಫ್‌ ರೇಸ್‌ನಲ್ಲಿ ರೋಚಕತೆ ಸೃಷ್ಟಿಯಾಗಿರುವುರಿಂದ ಪ್ರತಿ ತಂಡಕ್ಕೂ ಈಗ ಬಹಳ ಮಹತ್ವದ್ದು. ಆರ್‌ಸಿಬಿ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಡೆಲ್ಲಿ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 7ನೇ ಸ್ಥಾನದಲ್ಲಿದೆ. ತಂಡ ಕೊನೆ 5 ಪಂದ್ಯಗಳ ಪೈಕಿ 4ರಲ್ಲಿ ಸೋತಿದ್ದು, ಇನ್ನೊಂದು ಸೋಲು ಎದುರಾದರೆ ತಂಡದ ಪ್ಲೇ-ಆಫ್‌ ಹಾದಿ ಕಠಿಣಗೊಳ್ಳಲಿದೆ.

ರಾಹುಲ್‌ ಮೇಲೆ ಕಣ್ಣು:

ಕನ್ನಡಿಗ, ಡೆಲ್ಲಿ ತಂಡದ ಕೆ.ಎಲ್‌.ರಾಹುಲ್‌ ಕಳೆದ ಪಂದ್ಯದಲ್ಲಿ ಔಟಾಗದೆ 152 ರನ್‌ ಗಳಿಸಿದ್ದರು. ಹೀಗಾಗಿ ಸಹಜವಾಗಿಯೇ ಆರ್‌ಸಿಬಿ ವಿರುದ್ಧ ಪಂದ್ಯದಲ್ಲೂ ಅವರು ಪ್ರಮುಖ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ. ರಾಹುಲ್‌ 2018ರಲ್ಲಿ ಆರ್‌ಸಿಬಿಯಿಂದ ಹೊರಬಿದ್ದ ಬಳಿಕ ಈವರೆಗೂ ಆ ತಂಡದ ವಿರುದ್ಧ 789 ರನ್‌ ಕಲೆಹಾಕಿದ್ದಾರೆ. ಇದು ಐಪಿಎಲ್‌ನಲ್ಲಿ ಯಾವುದೇ ತಂಡದ ವಿರುದ್ಧ ರಾಹುಲ್‌ಗ ಗರಿಷ್ಠ. ಇನ್ನು, ಐಪಿಎಲ್‌ನಲ್ಲಿ ಹೇಜಲ್‌ವುಡ್‌ ವಿರುದ್ಧ 100+ ರನ್‌ ಕಲೆಹಾಕಿದ ಏಕೈಕ ಬ್ಯಾಟರ್‌ ರಾಹುಲ್‌. ಹೀಗಾಗಿಯೇ ಆರ್‌ಸಿಬಿ ವಿರುದ್ಧ ಅವರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ.

ಆರ್‌ಸಿಬಿಗೆ ಆತ್ಮವಿಶ್ವಾಸ:

ಡೆಲ್ಲಿ ವಿರುದ್ಧ ತವರಿನ ಪಂದ್ಯದಲ್ಲಿ ಸೋತ ಹೊರತಾಗಿಯೂ ಆರ್‌ಸಿಬಿ ತುಂಬು ಆತ್ಮವಿಶ್ವಾಸದಲ್ಲಿದೆ. ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ನಾಯಕ ರಜತ್‌ ಪಾಟೀದಾರ್‌, ಟಿಮ್‌ ಡೇವಿಡ್‌ ಅಬ್ಬರಿಸುತ್ತಿದ್ದಾರೆ. ಫಿಲ್‌ ಸಾಲ್ಟ್‌ ಗಾಯಗೊಂಡಿರುವ ಕಾರಣ ಜೇಕಬ್‌ ಬೆಥೆಲ್‌ಗೆ ಮತ್ತೊಂದು ಅವಕಾಶ ಸಿಗುವುದು ಬಹುತೇಕ ಖಚಿತ.

ಸಂಭವನೀಯ ಆಟಗಾರರು

ಆರ್‌ಸಿಬಿ: ಬೆಥೆಲ್‌, ವಿರಾಟ್‌, ದೇವದತ್‌, ರಜತ್‌(ನಾಯಕ), ಜಿತೇಶ್‌, ಟಿಮ್ ಡೇವಿಡ್‌, ಶೆಫರ್ಡ್‌, ಕೃನಾಲ್‌, ಭುವನೇಶ್ವರ್‌, ಹೇಜಲ್‌ವುಡ್‌, ರಸಿಕ್‌, ಸುಯಶ್‌.

ಡೆಲ್ಲಿ: ನಿಸ್ಸಾಂಕ, ರಾಹುಲ್‌, ನಿತೀಶ್‌, ಸಮೀರ್‌, ಅಕ್ಷರ್‌(ನಾಯಕ), ಮಿಲ್ಲರ್‌, ಸ್ಟಬ್ಸ್‌, ಜೇಮಿಸನ್‌/ಚಮೀರ, ಆಕಿಬ್‌ ನಬಿ, ಕುಲ್ದೀಪ್‌, ನಟರಾಜನ್‌, ಮುಕೇಶ್‌,

ಪಂದ್ಯ: ಸಂಜೆ 7.30ಕ್ಕೆ

ಮುಖಾಮುಖಿ: 33

ಆರ್‌ಸಿಬಿ: 19

ಡೆಲ್ಲಿ: 13