14ನೇ ಆವೃತ್ತಿಯ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಎಬಿ ಡಿವಿಲಿಯರ್ಸ್‌ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಏ.10): ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕು ಹುಟ್ಟಿಸುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌, ಆರ್‌ಸಿಬಿ ಆಪತ್ಬಾಂದವ ಎಬಿ ಡಿವಿಲಿಯರ್ಸ್‌ ಬ್ಯಾಟಿಂಗ್‌ಗೆ ಮನಸೋತಿದ್ದಾರೆ. 

ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿದ್ದರೂ ಸಹಾ ಆರ್‌ಸಿಬಿ ಪಾಲಿಗೆ ಎಬಿ ಡಿವಿಲಿಯರ್ಸ್‌ ಮತ್ತೊಮ್ಮೆ ತಂಡದ ಪಾಲಿಗೆ ಹೀರೋ ಆಗಿ ಹೊರಹೊಮ್ಮಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ದಕ್ಷಿಣ ಆಫ್ರಿಕಾ ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿಡಿ ಪವರ್‌ ಎಲ್ಲಾ ಪವರ್‌ಗಳನ್ನು ಸೋಲಿಸಿತು ಎಂದು ಕೊಂಡಾಡಿದ್ದಾರೆ. ಮುಂದುವರೆದು ಎಬಿ ಡಿವಿಲಿಯರ್ಸ್‌ ಆಟ ನೋಡಿ ಐಪಿಎಲ್‌ ಲೋಗೋ ಡಿಸೈನ್‌ ಮಾಡಲಾಗಿದೆ ಎಂದು ಮಿಸ್ಟರ್ 360 ಖ್ಯಾತಿಯ ಆಟಗಾರನನ್ನು ಕೊಂಡಾಡಿದ್ದಾರೆ.

ಮೊದಲ ಪಂದ್ಯ ಗೆಲ್ಲುವುದು ಮುಖ್ಯವಲ್ಲ; ಆರ್‌ಸಿಬಿ ಕಾಲೆಳೆದ ರೋಹಿತ್ ಶರ್ಮಾ

ವಿಲ್‌ ಪವರ್‌ = ಡಿವಿಲಿಯರ್ಸ್‌ ಪವರ್‌. ಡಿಫೀಟ್ಸ್ ಆಲ್‌ ಪವರ್‌. ಎಬಿಡಿ ಬ್ಯಾಟಿಂಗ್‌ ನೋಡಿ ಗುಟ್ಟಾಗಿ ಐಪಿಎಲ್‌ ಲೋಗೋ ನಿರ್ಮಾಣವಾಗಿದ್ದರೂ ಅಚ್ಚರಿಯಿಲ್ಲ. ಅದ್ಭುತ ಆಟ. ಇನ್ನು ಹರ್ಷೆಲ್‌ ಪಟೇಲ್‌ ಬೌಲಿಂಗ್‌ ಮತ್ತಷ್ಟು ಖುಷಿ ಕೊಟ್ಟಿತು ಎಂದು ಸೆಹ್ವಾಗ್ ಟ್ವೀಟ್‌ ಮಾಡಿದ್ದಾರೆ.

Scroll to load tweet…

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 9 ವಿಕೆಟ್‌ ಕಳೆದುಕೊಂಡು 159 ರನ್‌ ಕಲೆಹಾಕಿತ್ತು. ಈ ಬಾರಿ ಆರ್‌ಸಿಬಿ ಕೂಡಿಕೊಂಡಿರುವ ಹರ್ಷಲ್ ಪಟೇಲ್‌ 4 ಓವರ್‌ನಲ್ಲಿ ಕೇವಲ 27 ರನ್‌ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಬ್ಯಾಟಿಂಗ್‌ನಲ್ಲಿ ಮ್ಯಾಕ್ಸ್‌ವೆಲ್‌, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಸಮಯೋಚಿತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆಸರೆಯಾದರು. ಎಬಿಡಿ ಕೇವಲ 27 ಎಸೆತಗಳಲ್ಲಿ 48 ರನ್‌ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಏಪ್ರಿಲ್‌ 14ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.