ಈ ಬಾರಿಯ ಐಪಿಎಲ್‌ನಲ್ಲಿ ಬೌಲಿಂಗ್‌ನಲ್ಲಿ ನೀರಸ ನಿರ್ವಹಣೆ ತೋರುತ್ತಿದ್ದ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ರಸಿಕ್‌ ದರ್‌ ಅವರ 4 ವಿಕೆಟ್‌ಗಳ ನೆರವಿನಿಂದ ಎಲ್‌ಎಸ್‌ಜಿಯನ್ನು ಕೇವಲ 146 ರನ್‌ಗಳಿಗೆ ಕಟ್ಟಿಹಾಕಿದ್ದು, ಸುಲಭ ಗುರಿ ಬೆನ್ನಟ್ಟಲಿದೆ.

ಬೆಂಗಳೂರು (ಏ.15): ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಪ್ರತಿ ಪಂದ್ಯದಲ್ಲೂ 200ಕ್ಕೂ ಅಧಿಕ ರನ್ ಸಿಡಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಬೌಲಿಂಗ್ ದೊಡ್ಡ ತಲೆನೋವಾಗಿತ್ತು. ಆದರೆ, ಇಂದು ತವರಿನ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಸಂಪೂರ್ಣ ಭಿನ್ನವಾದ ಪ್ರದರ್ಶನ ನೀಡಿದರು. ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಕೇವಲ 146 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ.

Add Asianetnews Kannada as a Preferred SourcegooglePreferred

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಫಾಸ್ಟ್‌ ಬೌಲಿಂಗ್‌ ಪಡೆ ಅಕ್ಷರಶಃ ಬೆಂಕಿ ಉಗುಳಿತು. ಜೋಸ್‌ ಹ್ಯಾಸಲ್‌ವುಡ್‌ ಕರಾರುವಾಕ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದರೆ, ಅನುಭವಿ ಭುವನೇಶ್ವರ್ ಕುಮಾರ್ ತಮ್ಮ ಚಾಣಾಕ್ಷತನ ಮೆರೆದರು. ಆದರೆ ಇಂದಿನ ಹಿರೋ ಆಗಿ ಹೊರಹೊಮ್ಮಿದ್ದು ರಸಿಕ್‌ ದರ್‌. ಇನಿಂಗ್ಸ್‌ನ ಮೊದಲ ಮತ್ತು ಕೊನೆಯ ವಿಕೆಟ್ ಸೇರಿದಂತೆ ಒಟ್ಟು 4 ವಿಕೆಟ್ ಕಿತ್ತು ಲಕ್ನೋ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಸ್ಪಿನ್ನರ್‌ಗಳು 8 ಓವರ್‌ಗಳಲ್ಲಿ 72 ರನ್ ಬಿಟ್ಟುಕೊಟ್ಟು ಸ್ವಲ್ಪ ದುಬಾರಿಯಾದರಾದರೂ, ಕೃನಾಲ್ ಪಾಂಡ್ಯ ಎರಡು ಪ್ರಮುಖ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ನೆರವಾದರು.

ಲಕ್ನೋ ಬ್ಯಾಟಿಂಗ್ ವೈಫಲ್ಯ ಮುಂದುವರಿಕೆ

ಈ ಸೀಸನ್‌ನಲ್ಲಿ ಒಮ್ಮೆಯೂ 200 ರನ್‌ಗಳ ಗಡಿ ದಾಟದ ಏಕೈಕ ತಂಡ ಎಂಬ ಹಣೆಪಟ್ಟಿ ಹೊಂದಿರುವ ಎಲ್‌ಎಸ್‌ಜಿ, ಇಂದೂ ಕೂಡ ಅದೇ ಹಾದಿಯಲ್ಲಿ ಸಾಗಿತು. ಕಳೆದ ಬಾರಿ ಮಿಂಚಿದ್ದ ಟಾಪ್ ಆರ್ಡರ್ ಈ ಬಾರಿ ಕೈಕೊಡುತ್ತಿದೆ. ಮಿಚೆಲ್ ಮಾರ್ಷ್ ಆರಂಭದಲ್ಲಿ ಹೋರಾಟ ನಡೆಸಿದರೆ, ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ ಮತ್ತು ಮುಕುಲ್ ಚೌಧರಿ ಅವರ ಆಟ ಲಕ್ನೋ ಮೊತ್ತವನ್ನು 146ಕ್ಕೆ ತಲುಪಿಸಿತು.

ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಭುವನೇಶ್ವರ್ ಕುಮಾರ್, "ಇದು ಒಗ್ಗಟ್ಟಿನ ಪ್ರದರ್ಶನ. ಫೀಲ್ಡಿಂಗ್‌ನಲ್ಲಿ ಸಾಲ್ಟ್ ಮತ್ತು ಡೇವಿಡ್ ಹಿಡಿದ ಅದ್ಭುತ ಕ್ಯಾಚ್‌ಗಳು ಪಂದ್ಯದ ಗತಿ ಬದಲಿಸಿದವು," ಎಂದರು. ಈ ವಯಸ್ಸಿನಲ್ಲೂ ಮಿಂಚುತ್ತಿರುವ ರಹಸ್ಯದ ಬಗ್ಗೆ ಕೇಳಿದಾಗ ನಗುತ್ತಾ, "ನಾನು ಬಹುಶಃ ಹಳೆಯ ವೈನ್‌ನಂತೆ (Fine Wine) ವಯಸ್ಸಾದಂತೆ ಹೆಚ್ಚು ಮೌಲ್ಯ ಪಡೆಯುತ್ತಿದ್ದೇನೆ" ಎಂದು ತಮಾಷೆ ಮಾಡಿದರು. ಅಲ್ಲದೆ, ಪಂದ್ಯದ ನಂತರ ಸಿಗುವ ಬಿಡುವಿನ ಅವಧಿಯಲ್ಲಿ ಶಕ್ತಿ ವೃದ್ಧಿಸಿಕೊಳ್ಳುವುದು ನನ್ನ ಯಶಸ್ಸಿನ ಮಂತ್ರ ಎಂದರು.

ಆರ್‌ಸಿಬಿಗೆ ಸುಲಭ ಗುರಿ

ಲಕ್ನೋ ನೀಡಿದ 147 ರನ್‌ಗಳ ಗುರಿ ಆರ್‌ಸಿಬಿಯ ಬಲಾಢ್ಯ ಬ್ಯಾಟಿಂಗ್ ಪಡೆಗೆ ಸವಾಲೇ ಅಲ್ಲ ಎನ್ನಬಹುದು. ಹರ್ಷ ಭೋಗ್ಲೆ ಹೇಳಿದಂತೆ, ಈ ಸೀಸನ್‌ನಲ್ಲಿ 20 ಓವರ್‌ಗಳನ್ನು ಪೂರ್ತಿಯಾಗಿ ಆಡಿ ತಂಡವೊಂದು ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ. ಆರ್‌ಸಿಬಿ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿದೆ.