ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವ ತ್ಯಜಿಸಲು ಸೌರವ್ ಗಂಗೂಲಿ ಜೊತೆಗಿನ ಜಟಾಪಟಿ ಕಾರಣ ಅನ್ನೋ ಆರೋಪಗಳಿವೆ. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಹಲವು ಬಾರಿ ವರದಿಯಾಗಿದೆ. ಇದೀಗ ಮೈದಾನದಲ್ಲೇ ಇದು ಸ್ಪಷ್ಟವಾಗಿದೆ. ಫೀಲ್ಡಿಂಗ್ ವೇಳೆ ಕೊಹ್ಲಿ, ಡಗೌಟ್‌ನಲ್ಲಿದ್ದ ಗಂಗೂಲಿಯನ್ನು ಗುರಾಯಿಸಿದರೆ, ಗೆದ್ದ ಬಳಿಕ ಗಂಗೂಲಿ ಬಿಟ್ಟು ಇತರರಿಗೆ ಶೇಕ್‌ಹ್ಯಾಂಡ್ ಮಾಡಿ ತೆರಳಿದ್ದಾರೆ.

ಬೆಂಗಳೂರು(ಏ.15): ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವ ತ್ಯಜಿಸಿದ ಹಿಂದೆ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇರ ಕಾರಣ ಅನ್ನೋ ಆರೋಪವಿದೆ. ಕೊಹ್ಲಿ ಪ್ರತಿ ನಿರ್ಧಾರದಲ್ಲಿ ಮೂಗುತೂರಿಸುತ್ತಿದ್ದ ಗಂಗೂಲಿಯಿಂದ ಕೊಹ್ಲಿ ಬೇಸತ್ತಿದ್ದರು ಅನ್ನೋ ವರದಿಗಳಿವೆ. ಬಳಿಕ ಕೊಹ್ಲಿ ನಾಯಕತ್ವಕ್ಕೆ ಗುಡ್‌ಬೈ ಹೇಳಿದರೆ, ಗಂಗೂಲಿ ಮಾಜಿ ಅಧ್ಯಕ್ಷರಾದರು. ಆದರೆ ಇವರ ವೈಮನಸ್ಸು ಮಾತ್ರ ಹಾಗೇ ಇದೆ ಅನ್ನೋದು ಇಂದಿನ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಬಯಲಾಗಿದೆ. ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಕ್ಯಾಚ್ ಹಿಡಿದು, ಡಗೌಟ್‌ನಲ್ಲಿ ಕುಳಿತಿದ್ದ ಗಂಗೂಲಿಯತ್ತ ತಿರುಗಿ ಗುರಾಯಿಸಿದ್ದಾರೆ. ಇನ್ನು ಗೆಲುವಿನ ಬಳಿಕ ಕೊಹ್ಲಿ ಡೆಲ್ಲಿ ತಂಡದ ಆಟಗಾರರ ಸಿಬ್ಬಂದಿಗಳಿಗೆ ಶೇಕ್‌ಹ್ಯಾಂಡ್ ಮಾಡಿದ್ದಾರೆ. ಆದರೆ ಕೊಹ್ಲಿ ಗಂಗೂಲಿಗೆ ಶೇಕ್‌ಹ್ಯಾಂಡ್ ಮಾಡದೇ ತೆರಳಿದ್ದಾರೆ. 

ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವಿನ ಗುದ್ದಾಟ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹಿರಂಗವಾಗಿದೆ. ಒಬ್ಬರಿಗೊಬ್ಬರು ಮುಖ ನೋಡಲು ಇಷ್ಟಪಡುತ್ತಿಲ್ಲ. 18ನೇ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಅಮನ್ ಹಕೀಮ್ ಖಾನ್ ಸಿಕ್ಸರ್ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಕ್ಯಾಚ್ ಹಿಡಿದರು. ಬಳಿಕ ಕೊಹ್ಲಿ ಹಿಂಭಾಗದಲ್ಲಿ ಡಗೌಟ್‌ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿಯನ್ನು ದಿಟ್ಟಿಸಿ ನೋಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.

IPL 2023 ಆರ್‌ಸಿಬಿ ಸೋಲಿನ ಅನಿಷ್ಠ ದೂರಮಾಡಿದ ಕನ್ನಡಿಗ ವೈಶಾಕ್‌..!

ದಿಟ್ಟ ಬೌಲಿಂಗ್ ಪ್ರದರ್ಶನದ ಮೂಲಕ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 23 ರನ್‌ಗಳಿಂದ ಮಣಿಸಿತು. ಈ ಮೂಲಕ ಸೋಲಿನಿಂದ ಹೊರಬಂದಿತು. ಗೆಲುವಿನ ಬಳಿಕ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಸಿಬ್ಬಂದಿಗಳು ಕೈಕುಲುಕಿದ್ದಾರೆ. ಈ ವೇಳೆ ಸರದಿ ಸಾಲಿನಲ್ಲಿ ಬಂದ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್‌ ಕೈಕುಲುಕಿದ್ದಾರೆ. ಪಾಂಟಿಂಗ್ ಹಿಂಭಾಗದಲ್ಲಿದ್ದ ಗಂಗೂಲಿಗೆ ಶೇಕ್‌ಹ್ಯಾಂಡ್ ಮಾಡದೇ ವೇಗವಾಗಿ ತೆರಳಿದ್ದಾರೆ. ಈ ವೇಳೆ ಪಾಂಟಿಂಗ್ ಕೊಹ್ಲಿ ಹಿಡಿದು ಏನೋ ಹೇಳಿದ್ದಾರೆ. ಆದರೂ ಕೊಹ್ಲಿ ಗಂಗೂಲಿ ಮುಖ ನೋಡಿಲ್ಲ. ಇತ್ತ ಗಂಗೂಲಿ ಕೂಡ ಇದೇ ಸಂದರ್ಭ ಬಳಸಿಕೊಂಡು ಅಲ್ಲಿಂದ ಮೆಲ್ಲನೆ ಜಾರಿಕೊಂಡು ಮುಂದೆ ಬಂದು ಆರ್‌ಸಿಬಿಯ ಇತರ ಆಟಗಾರರ ಕೈಕುಲುಕಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿನ ಈ ಘಟನೆ ಕೊಹ್ಲಿ ಹಾಗೂ ಗಂಗೂಲಿ ನಡುವಿನ ವೈಮನಸ್ಸನ್ನು ಬಹಿರಂಗಗೊಳಿಸಿತು. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹಾಫ್ ಸೆಂಚುರಿ ಸಿಡಿಸಿದ ಕೊಹ್ಲಿ ಮೈದಾನದಲ್ಲೇ ತಮ್ಮ ಆಕ್ರೋಶ ಹೊರಹಾಕಿದರು. ಕೊಹ್ಲಿಯ ಆಕ್ರೋಶಭರಿತ ಸಂಭ್ರಮಾಚರಣೆ ಕೂಡ ಗಂಗೂಲಿ ವೈಮನಸ್ಸೇ ಕಾರಣವೇ ಅನ್ನೋದು ಚರ್ಚೆಯಾಗುತ್ತಿದೆ.

ಅನೂಜ್ ರಾವತ್ ಇಂಪ್ಯಾಕ್ಟ್‌ ಪ್ಲೇಯರ್ ಆಯ್ಕೆ ಮಾಡಿದ ಆರ್‌ಸಿಬಿ ಫುಲ್ ಟ್ರೋಲ್‌..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 174 ರನ್ ಸಿಡಿಸಿತು. ವಿರಾಟ್ ಕೊಹ್ಲಿ 34 ಎಸೆತದಲ್ಲಿ 50 ರನ್ ಸಿಡಿಸಿದರೆ, ನಾಯಕ ಫಾಫ್ ಡುಪ್ಲೆಸಿಸ್ 22 ರನ್ ಸಿಡಿಸಿದರು. ಮಹಿಪಾಲ್ ಲೊಮ್ರೊರ್ 26, ಗ್ಲೆನ್ ಮ್ಯಾಕ್ಸ್‌ವೆಲ್ 24, ಶೆಹಬಾಜ್ ಅಹಮ್ಮದ್ 20 ಹಾಗೂ ಅನೂಜ್ ರಾವತ್ 15 ರನ್ ಸಿಡಿಸಿದರು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿದ ವಿಜಯಕುಮಾರ್ ವೈಶಾಕ್ ದಾಳಿಗೆ ತತ್ತರಿಸಿತು. ಮನೀಶ್ ಪಾಂಡೆ ಅರ್ಧಶತಕ ಸಿಡಿಸಿ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ಕಳೆದುಕೊಂಡು 151 ರನ್ ಸಿಡಿಸಿತು. ಈ ಮೂಲಕ ಡೆಲ್ಲಿ ಮತ್ತೆ ಸೋಲಿಗೆ ಗುರಿಯಾಯಿತು.


Scroll to load tweet…
Scroll to load tweet…
Scroll to load tweet…