* ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಕಂಡ ಆರ್‌ಸಿಬಿ* ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ವೇಗಿ ವೈಶಾಕ್ ವಿಜಯ್‌ ಕುಮಾರ್* ಸತತ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ ಬೆಂಗಳೂರು

ಬೆಂಗಳೂರು(ಏ.15): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಕನ್ನಡಿಗರಿಗೆ ಅವಕಾಶ ನೀಡಿದರೆ ಏನು ಮಾಡಬಲ್ಲರು ಎನ್ನುವುದನ್ನು ವೇಗಿ ವೈಶಾಕ್ ವಿಜಯ್‌ಕುಮಾರ್ ತಾವಾಡಿದ ಮೊದಲ ಐಪಿಎಲ್‌ ಪಂದ್ಯದಲ್ಲೇ ಸಾಬೀತು ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ವೈಶಾಕ್ ಕೇವಲ 20 ರನ್‌ಗೆ 3 ವಿಕೆಟ್ ಕಬಳಿಸಿ ಆರ್‌ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಕಳೆದೆರಡು ಪಂದ್ಯ ಸೋತಿದ್ದ ಆರ್‌ಸಿಬಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಎದುರು 23 ರನ್ ಜಯಭೇರಿ ಬಾರಿಸಿದೆ. ಇನ್ನು ಡೇವಿಡ್‌ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಟೂರ್ನಿಯಲ್ಲಿ ಸತತ 5ನೇ ಸೋಲು ಅನುಭವಿಸಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 175 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲ ಕಣಕ್ಕಿಳಿದ ಪೃಥ್ವಿ ಶಾ ಖಾತೆ ತೆರೆಯುವ ಮುನ್ನವೇ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ರೋವ್ಮನ್ ಪೋವೆಲ್ ಬದಲಿಗೆ ಡೆಲ್ಲಿ ಪಾಳಯ ಸೇರಿಕೊಂಡಿದ್ದ ಮಿಚೆಲ್ ಮಾರ್ಷ್‌ ಕೂಡಾ ಖಾತೆ ತೆರೆಯುವ ಮುನ್ನವೇ ವೇಯ್ನ್‌ ಪಾರ್ನೆಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್‌ ನಡೆಸಿದರು. ಇನ್ನು ಇದರ ಬೆನ್ನಲ್ಲೇ ಪ್ರತಿಭಾನ್ವಿತ ಯುವ ಬ್ಯಾಟರ್ ಯಶ್ ಧುಳ್ ಕೂಡಾ ಒಂದು ರನ್‌ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಸ್ಪೋಟಕ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದ್ದ ನಾಯಕ ಡೇವಿಡ್‌ ವಾರ್ನರ್(19ರನ್, 13 ಎಸೆತ) ಅವರನ್ನು ಕನ್ನಡಿಗ ವೈಶಾಕ್ ವಿಜಯ್‌ಕುಮಾರ್‌ ಬಲಿ ಪಡೆಯುವ ಮೂಲಕ ಐಪಿಎಲ್‌ನಲ್ಲಿ ಚೊಚ್ಚಲ ವಿಕೆಟ್‌ ಅನ್ನೇ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Scroll to load tweet…

ಕನ್ನಡಿಗನ ಆರ್ಭಟ: ಕರ್ಣ್ ಶರ್ಮಾ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಕನ್ನಡದ ವೇಗಿ ವೈಶಾಕ್ ವಿಜಯ್‌ಕುಮಾರ್, ತಾವಾಡಿದ ಚೊಚ್ಚಲ ಐಪಿಎಲ್‌ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಲಲಿತ್ ಯಾದವ್‌ ಡೆಲ್ಲಿ ಕ್ಯಾಪಿಟಲ್ಸ್‌ನ ವಾರ್ನರ್‌, ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್ ವಿಕೆಟ್ ಕಬಳಿಸಿ ಮಿಂಚಿದರು. 4 ಓವರ್ ಬೌಲಿಂಗ್ ಮಾಡಿದ ವೈಶಾಕ್ ವಿಜಯ್‌ಕುಮಾರ್ ಕೇವಲ 20 ರನ್ ನೀಡಿ 3 ಬಲಿ ಪಡೆದರು.

Scroll to load tweet…

ವಿರಾಟ್ ಕೊಹ್ಲಿ ಮತ್ತೊಂದು ಫಿಫ್ಟಿ; ಡೆಲ್ಲಿಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ

ಮನೀಶ್ ಪಾಂಡೆ ಹೋರಾಟ ವ್ಯರ್ಥ: ಇನ್ನು ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಆಟವಾಡಿದ ಮನೀಶ್ ಪಾಂಡೆ, ತವರಿನ ಅಂಗಳದಲ್ಲಿ ಸಮಯೋಚಿತ ಅರ್ಧಶತಕ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಮನೀಶ್ ಪಾಂಡೆ ಕೇವಲ 38 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 50 ರನ್‌ ಬಾರಿಸಿ ವನಿಂದು ಹಸರಂಗ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಅಕ್ಷರ್ ಪಟೇಲ್‌(21) ಹಾಗೂ ಅಮನ್‌ ಹಕೀಂ ಖಾನ್(18) ಹಾಗೂ ಏನ್ರಿಚ್ ನೋಕಿಯ(23*) ಆರ್‌ಸಿಬಿ ಬೌಲರ್‌ಗಳೆದರು ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ಮೊದಲ ವಿಕೆಟ್‌ಗೆ 42 ರನ್‌ಗಳ ಜತೆಯಾಟವಾಡಿತು. ಫಾಫ್ ಡು ಪ್ಲೆಸಿಸ್‌ 22 ರನ್ ಬಾರಿಸಿದರೆ, ಮಹಿಪಾಲ್ ಲೋಮ್ರಾರ್ 26 ರನ್‌ ಬಾರಿಸಿದರು. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅನೂಜ್‌ ರಾವತ್ ಹಾಗೂ ಶಹಬಾಜ್ ಅಹಮ್ಮದ್ ಜೋಡಿ 7ನೇ ವಿಕೆಟ್‌ಗೆ ಮುರಿಯದ 42 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು.