ಐಪಿಎಲ್ ಗೆಲುವಿನ ನಂತರ ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ದುರಂತದ ತನಿಖಾ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಯಾವುದೇ ಪೂರ್ವಯೋಜನೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರಿಗೆ ಗೊಂದಲ ಮೂಡಿಸುವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ದುರಂತಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ಮರುದಿನ ಆರ್‌ಸಿಬಿ ಫ್ರಾಂಚೈಸಿಯು ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಜಯೋತ್ಸವ ಯಾತ್ರೆ ನಡೆಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಈ ಘಟನೆಯ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರ ತನ್ನ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದು, ಪೂರ್ವತಯಾರಿ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದೇ ಈ ಘಟನೆಗೆ ಕಾರಣ ಎಂದು ವರದಿ ಸಲ್ಲಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯನ್ನು ತನಿಖೆಯಲ್ಲಿ ದೂರಿದೆ.
ಆಯೋಜಕರು ಕಾರ್ಯಕ್ರಮಕ್ಕೆ ಸರಿಯಾದ ಪ್ಲಾನ್ ಮಾಡಿಕೊಳ್ಳದೇ ಇರೋದೇ ಈ ಘಟನೆಗೆ ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಡಿಎನ್‌ಎ(ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ)ಮಾಡಿದ ಲೋಪಗಳನ್ನು ಉಲ್ಲೇಖಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಥಮ ಚಿಕಿತ್ಸೆ, ಬಂದೋಬಸ್ತ್ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಆರ್‌ಸಿಬಿ ಹಾಗೂ ಡಿಎನ್‌ಎ ಸಂಸ್ಥೆ ತಿಳಿಸಿತ್ತು. ಆದರೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸೋದರಲ್ಲಿ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಗಳು ವಿಫಲವಾಗಿವೆ ಎಂದು ರಾಜ್ಯಸರ್ಕಾರ ತನ್ನ ತನಿಖಾ ವರದಿಯಲ್ಲಿ ದೂರಿದೆ.
ಒಂದು ವೇಳೆ ಮುಂಚಿತವಾಗಿಯೇ ಸರ್ಕಾರದಿಂದ ಅನುಮತಿ ಪಡೆದಿದ್ರೆ ಇಲಾಖೆಗಳಿಂದ ಪ್ಲಾನ್ ಮಾಡಿಕೊಳ್ಳುವ ಸಾಧ್ಯತೆಯಿತ್ತು. ಆದರೆ ಅರ್ಜೆಂಟ್ ಆಗಿ ಅನುಮತಿ ಕೇಳಿದ್ದರಿಂದ ಬಂದೋಬಸ್ತ್, ಎಸ್‌ಓಪಿ ವ್ಯವಸ್ಥೆ ಪ್ಲಾನ್ ಮಾಡಿಕೊಳ್ಳುವಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆ ಫೇಲ್ ಆಗಿದೆ ಎಂದು ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಬರ್ತಾರೆ ಎಂದು ಅಂದಾಜು ಮಾಡಲು ಸಾಧ್ಯವಾಗಲಿಲ್ಲ. ಟ್ರೋಫಿ ಗೆದ್ದ ಮರುದಿನ ಬೆಳಗ್ಗೆ 7.01 ಗಂಟೆಗೆ ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಕ್ಟರಿ ಪೆರೇಡ್‌ನಲ್ಲಿ ಭಾಗವಹಿಸಲು ಎಲ್ಲರಿಗೂ ಫ್ರೀ ಎಂಟ್ರಿ ಎಂದು ಪೊಲೀಸರಿಗೆ ಮಾಹಿತಿ ನೀಡದೆಯೇ ಘೋಷಿಸಿತ್ತು.
ಇದಾಗಿ ಸ್ವಲ್ಪಹೊತ್ತಿಗೆ ಅಂದರೆ ಬೆಳಗ್ಗೆ 8 ಗಂಟೆಗೆ ಆರ್‌ಸಿಬಿ ಫ್ರಾಂಚೈಸಿಯು ಮತ್ತೊಂದು ಪೋಸ್ಟ್ ಹಂಚಿಕೊಂಡಿತ್ತು. ಅದರಲ್ಲಿ ಆರ್‌ಸಿಬಿಯ ಪ್ರಮುಖ ಆಟಗಾರ, ಈ ಗೆಲುವನನ್ಉ ಆರ್‌ಸಿಬಿ ತನ್ನ ಬೆಂಗಳೂರು ಅಭಿಮಾನಿಗಳ ಜತೆ ಸಂಭ್ರಮಿಸಲಿದೆ ಎನ್ನುವ ವಿಡಿಯೋ ಪೋಸ್ಟ್ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು ಎಂದು ಸರ್ಕಾರ ತನ್ನ ತನಿಖಾ ವರದಿಯಲ್ಲಿ ದೂರಿದೆ.
ಇನ್ನು ಇದಾದ ಬಳಿಕ ಆರ್‌ಸಿಬಿ ಫ್ರಾಂಚೈಸಿಯು ಮಧ್ಯಾಹ್ನ 3.14ರ ಹೊತ್ತಿಗೆ ಮತ್ತೊಂದು ಪೋಸ್ಟ್ ಹಂಚಿಕೊಂಡಿತ್ತು. ಆ ಪೋಸ್ಟ್‌ನಲ್ಲಿ ವಿಕ್ಟರಿ ಪರೇಡ್ ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ನಡೆಯಲಿದೆ. ಆದರೆ ಲಿಮಿಟೆಡ್ ಪಾಸ್‌ಗಳಿದ್ದು, shop.royalchallengers.com ಇಲ್ಲಿ ಪಾಸ್ ಪಡೆದುಕೊಳ್ಳಬೇಕು ಎಂದು ಪೋಸ್ಟ್ ಮಾಡಿತ್ತು. ಇದು ಅಭಿಮಾನಿಗಳು ಗೊಂದಲಕ್ಕೀಡಾಗುವಂತೆ ಮಾಡಿತು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್‌ಸಿಬಿ ಮಾಡಿದ್ದ ಪೋಸ್ಟ್ ಅನ್ನು 44 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಇನ್ನು ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಮೂರು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಹೀಗಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.
