ಐಪಿಎಲ್ 2026ರ ಚಾಂಪಿಯನ್ ಆದ ಆರ್‌ಸಿಬಿ, ಇದೀಗ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಮುಂಬರುವ 2027ರ ಐಪಿಎಲ್ ಹರಾಜಿಗೂ ಮುನ್ನ, ತಂಡದ ಪರ್ಸ್ ಬ್ಯಾಲೆನ್ಸ್ ಹೆಚ್ಚಿಸಲು ಯಶ್ ದಯಾಳ್, ಅಭಿನಂದನ್ ಸಿಂಗ್ ಮತ್ತು ರಿಚರ್ಡ್ ಗ್ಲೀಸನ್ರನ್ನು ಫ್ರಾಂಚೈಸಿ ರಿಲೀಸ್‌ ಮಾಡಬಹುದು.

ಬೆಂಗಳೂರು (ಜೂ.3): ಐಪಿಎಲ್‌ 2026ರ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿ ಆರ್‌ಸಿಬಿ ಇತಿಹಾಸ ನಿರ್ಮಿಸಿದೆ. ಈ ಯಶಸ್ವಿ ಸೀಸನ್‌ನಲ್ಲಿ ಆರ್‌ಸಿಬಿ ತನ್ನ ಒಟ್ಟು 24 ಆಟಗಾರರ ಬಲಿಷ್ಠ ಪಡೆಯಲ್ಲಿ 16 ಆಟಗಾರರಿಗೆ ಮೈದಾನಕ್ಕಿಳಿದು ಆಡುವ ಅವಕಾಶವನ್ನು ನೀಡಿತ್ತು. ಆದರೆ, ಮುಂಬರುವ 2027ರ ಐಪಿಎಲ್ ಆವೃತ್ತಿಗೂ ಮುನ್ನ ತಂಡದ ಹಿತದೃಷ್ಟಿಯಿಂದ ಹಾಗೂ ಪರ್ಸ್ ಬ್ಯಾಲೆನ್ಸ್‌ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೆಲ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ಕಾಲದಲ್ಲಿ ಒಂದೇ ಒಂದು ಟ್ರೋಫಿಗಾಗಿ ತೀವ್ರ ಹೋರಾಟ ನಡೆಸುತ್ತಿದ್ದ ಆರ್‌ಸಿಬಿ, ಈಗ ಸತತ ಎರಡು ಟ್ರೋಫಿಗಳನ್ನು ಗೆದ್ದು ಬೀಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಟ್ರೋಫಿ ವಂಚಿತವಾಗಿದ್ದ ಈ ತಂಡ ಪ್ರಶಸ್ತಿ ಗೆಲ್ಲುತ್ತಾ ಇಲ್ಲವೇ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿದ್ದವು. ಆದರೆ ಈಗ ಇತಿಹಾಸ ಬದಲಾಗಿದೆ. ಆರ್‌ಸಿಬಿ 2025 ಮತ್ತು 2026ರ ಎರಡೂ ಸೀಸನ್‌ಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಪ್ರಶಸ್ತಿಯ ಹ್ಯಾಟ್ರಿಕ್ ಸಾಧಿಸಲು ಆರ್‌ಸಿಬಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಅದಕ್ಕಾಗಿ ಮಿನಿ ಹರಾಜಿನ ಮೇಲೆ ಕಣ್ಣಿಟ್ಟಿದೆ. ಮಿನಿ ಹರಾಜಿನಲ್ಲಿ ಭಾಗವಹಿಸಲು ಹಣದ ಅವಶ್ಯಕತೆ ಇರುವುದರಿಂದ ವಿಜೇತ ತಂಡದ ಮುಖ್ಯ ಲೈನ್-ಅಪ್‌ನಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡದಿದ್ದರೂ, ಮೂವರು ಆಟಗಾರರನ್ನು ರಿಲೀಸ್ ಮಾಡಲು ಫ್ರಾಂಚೈಸಿ ಚಿಂತನೆ ನಡೆಸಿದೆ. ಆ ಮೂವರು ಆಟಗಾರರ ವಿವರ ಇಲ್ಲಿದೆ:

ಯಶ್ ದಯಾಳ್ (Yash Dayal) - ₹5 ಕೋಟಿ

ಆರ್‌ಸಿಬಿ ತನ್ನ ಪರ್ಸ್‌ನಲ್ಲಿ ಹಣವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ವೇಗಿ ಯಶ್ ದಯಾಳ್ ಅವರನ್ನು ತಂಡದಿಂದ ಬಿಡುಗಡೆ ಮಾಡುವುದನ್ನು ಬಿಟ್ಟು ಬೇರೆ ಪರ್ಯಾಯ ಮಾರ್ಗವಿಲ್ಲ. ಏಕೆಂದರೆ ಈ ಬಾರಿಯ ಸೀಸನ್‌ನಲ್ಲಿ ಯಶ್ ದಯಾಳ್ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಮುಂದಿನ ಸೀಸನ್‌ನಲ್ಲಿ ಅವರು ಆಡಬೇಕಾದರೆ ಮೊದಲು ತಮ್ಮ ಮೇಲಿರುವ ಆರೋಪಗಳಿಂದ ದೋಷಮುಕ್ತರಾಗಬೇಕಿದೆ. ಹೀಗಾಗಿ ಆರ್‌ಸಿಬಿ ಇವರನ್ನು ರಿಲೀಸ್ ಮಾಡುವ ಮೂಲಕ ತನ್ನ ಪರ್ಸ್ ಬ್ಯಾಲೆನ್ಸ್ ಅನ್ನು 5 ಕೋಟಿ ರೂಪಾಯಿಗಳಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

ಅಭಿನಂದನ್ ಸಿಂಗ್ (Abhinandan Singh) - ₹30 ಲಕ್ಷ

ಯುವ ಆಟಗಾರ ಅಭಿನಂದನ್ ಸಿಂಗ್ ಆರ್‌ಸಿಬಿ ಪರ ಈವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಅವರು ಎಸೆದ 58 ಎಸೆತಗಳಲ್ಲಿ ಕೇವಲ 3 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ ಹಾಗೂ ಬರೋಬ್ಬರಿ 122 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ. ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಇವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಇವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 30 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಆರ್‌ಸಿಬಿ ಖರೀದಿಸಿತ್ತು.

ರಿಚರ್ಡ್ ಗ್ಲೀಸನ್ (Richard Gleeson) - ₹1.60 ಕೋಟಿ

ಶ್ರೀಲಂಕಾದ ವೇಗಿ ನುವಾನ್ ತುಷಾರ ಅವರ ಬದಲಿಗೆ ಆರ್‌ಸಿಬಿ ತಂಡವು ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಮುಂದಿನ ಸೀಸನ್‌ನಲ್ಲಿ ಇವರನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಫ್ರಾಂಚೈಸಿಗೆ ಕೊಂಚ ಕಷ್ಟದಂತೆ ಕಾಣುತ್ತಿದೆ. ಮುಂದಿನ ಆವೃತ್ತಿಯಲ್ಲಿ ಇವರ ಬದಲಿಗೆ ಮತ್ತೆ ನುವಾನ್ ತುಷಾರ ಅವರಿಗೇ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ. ಹಾಗಾಗಿ ಐಪಿಎಲ್ 2027ರ ಟೂರ್ನಿಯಲ್ಲಿ ಗ್ಲೀಸನ್ ಆರ್‌ಸಿಬಿ ಜರ್ಸಿಯಲ್ಲಿ ಕಾಣಿಸಿಕೊಳ್ಳದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆರ್‌ಸಿಬಿ ಇವರಿಗಾಗಿ 1.60 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿತ್ತು.

ಪ್ರಸಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಂಪೂರ್ಣ ತಂಡ

ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ವಿ. ರಾಧಾಕೃಷ್ಣನ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡಾನ್ ಕಾಕ್ಸ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ರಿಚರ್ಡ್ ಗ್ಲೀಸನ್.