ಆರ್‌ಸಿಬಿ ತಂಡದ ಆಟಗಾರ್ತಿಯರು ಮಂಗಳವಾರ ಟೀಮ್ ಹೋಟೆಲ್‌ನಲ್ಲಿ ಭರ್ಜರಿಯಾಗಿ ಹೋಳಿ ಸಂಭ್ರಮ ಆಚರಿಸಿದ್ದರು. ಇದೇ ಮೊದಲ ಬಾರಿಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ಆರ್‌ಸಿಬಿ ತಂಡದ ಬೌಲರ್ ಎಲ್ಲೀಸ್ ಪೆರ್ರಿಗೆ ಹೋಳಿನ ಬಣ್ಣ ಶಾಶ್ವತವಾಗಿ ಇರೋದಾ ಅನ್ನೋ ಅನುಮಾನ ಕಾಡಿದೆಯಂತೆ. ತಮ್ಮ ಆತಂಕವನ್ನು ಅಭಿಮಾನಿಗಳಲ್ಲಿ ಕೇಳಿ ಪರಿಹರಿಸಿಕೊಂಡಿದ್ದಾರೆ.
ಮುಂಬೈ (ಮಾ.8): ಇಡೀ ದೇಶ ಹೋಳಿ ಸಂಭ್ರಮದಲ್ಲಿದೆ. ಮೊದಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನ ತಂಡಗಳು ಕೂಡ ಇದರಿಂದ ಹೊರತಾಗಿಲ್ಲ. ಐದೂ ತಂಡದ ಆಟಗಾರ್ತಿಯರು ಹಾಗೂ ತಂಡದ ಸಿಬ್ಬಂದಿ ಟೀಮ್ ಹೋಟೆಲ್‌ನಲ್ಲಿ ಹೋಳಿ ಸಂಭ್ರಮ ಆಚರಿಸಿ, ಬಣ್ಣದಲ್ಲಿ ಮಿಂದೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳಿಗೆ ಮಂಗಳವಾರ ಯಾವುದೇ ಪಂದ್ಯಗಳಿರಲಿಲ್ಲ. ಅದಕ್ಕಾಗಿ ಈ ರಂಡದಲ್ಲಿರುವ ಆಟಗಾರ್ತಿಯರು ತಮ್ಮಲ್ಲಿನ ವಿದೇಶೀ ಆಟಗಾರ್ತಿಯರೊಂದಿಗೆ ಟೀಮ್ ಹೋಟೆಲ್‌ನಲ್ಲಿ ಬಣ್ಣದ ಹಬ್ಬವನ್ನು ಆಚರಣೆ ಮಾಡಿತು. ಆದರೆ, ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್ ಹಾಗೂ ಆಸೀಸ್ ತಾರೆ ಎಲ್ಲೀಸ್ ಪೆರ್ರಿಗೆ ಹೋಳಿ ಸಂಭ್ರಮ ಆಚರಿಸಿದ್ದು ಸ್ವಲ್ಪ ಹೆಚ್ಚಾದಂತೆ ಕಂಡಿದೆ. ಆರ್‌ಸಿಬಿ ತಂಡದ ಆಟಗಾರ್ತಿಯರ ಹೋಳಿಯ ಸಂಭ್ರಮವನ್ನು ಟೀಮ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿತ್ತು. ಈ ಎಲ್ಲಾ ಸಂಭ್ರಮ ಮುಗಿದ ಬಳಿಕ ಎಲ್ಲೀಸ್ ಪೆರ್ರಿಗೆ ಹೋಳಿಯ ಬಣ್ಣ ಶಾಶ್ವತವಾಗಿ ಉಳಿಯಲಿದೆಯೇ ಅನುಮಾನ ಕಾಡಿದೆ. ಯಾಕೆಂದರೆ, ಎರಡು ಬಾರಿ ಅವರು ತಮ್ಮ ತಲೆಗೂದಲನ್ನು ತೊಳೆದುಕೊಂಡರೂ, ಗುಲಾಬಿ ಬಣ್ಣ ಹಾಗೆಯೇ ಉಳಿದುಕೊಂಡಿತ್ತು.
ಬುಧವಾರ ಲೀಗ್‌ನಲ್ಲಿ ತಮ್ಮ ಮೂರನೇ ಪಂದ್ಯವನ್ನು ಆರ್‌ಸಿಬಿ ಆಡಲಿದ್ದು, ಅದಕ್ಕೂ ಮುನ್ನ ಎಲ್ಲೀಸ್ ಪೆರ್ರಿ ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಹೊನ್ನಬಣ್ಣದ ತಲೆಗೂದಲು ಗುಲಾಬಿ ಬಣ್ಣಕ್ಕೆ ತಿರುಗಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. 'ಈ ಬಣ್ಣ ಶಾಶ್ವತವಾಗಿ ಉಳಿದುಕೊಳ್ಳಲಿದೆಯೇ ಎನ್ನುವ ಅಚ್ಚರಿ ನನ್ನನ್ನು ಕಾಡಿದೆ. ಈಗಾಗಲೇ ನಾನು ಎರಡು ಬಾರಿ ಕೂದಲನ್ನು ತೊಳೆದುಕೊಂಡಿದ್ದೇನೆ' ಎಂದು ಅವರು ಬರೆದುಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ಕೆಲ ಸಲಹೆಗಳನ್ನು ನೀಡಿದ್ದಾರೆ. ಹೋಳಿ ಹಬ್ಬವನ್ನು ಆಚರಣೆ ಮಾಡುವ ಮುನ್ನ ಕೂದಲಿಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಬೇಕಿತ್ತು ಎಂದಿದ್ದರೆ, ಇನ್ನೂ ಕೆಲವರು ಒಂದು ವಾರ ಅಥವಾ ಎರಡು ವಾರದಲ್ಲಿ ಈ ಬಣ್ಣ ಹೋಗಲಿದೆ ಎಂದು ಸಮಾಧಾನ ಮಾಡಿದ್ದಾರೆ.
WPL 2023: ಹೋಳಿ ಬಣ್ಣದಲ್ಲಿ ಮಿಂದೆದ್ದ ಆರ್‌ಸಿಬಿ ಮಹಿಳೆಯರು!
ಆದರೆ ಎಲ್ಲೀಸ್ ಪೆರ್ರಿ ಹಾಗೂ ಸಂಪೂರ್ಣ ಆರ್‌ಸಿಬಿ ತಂಡದ ಗಮನ ಇರುವುದು ಕ್ರಿಕೆಟ್‌ನ ಬಗ್ಗೆ. ಈಗಾಗಲೇ ಲೀಗ್‌ನಲ್ಲಿ ಮೊದಲ ಎರಡು ಪಂದ್ಯದಲ್ಲಿ ಆರ್‌ಸಿಬಿ ದೊಡ್ಡ ಅಂತರದ ಸೋಲು ಕಂಡಿದೆ. ಸ್ಟಾರ್‌ಗಳಿಂದಲೇ ತುಂಬಿರುವ ಆರ್‌ಸಿಬಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೊದಲ ಎರಡು ಪಂದ್ಯಗಳಲ್ಲಿ ನೀರಸವಾಗಿ ಆಟವಾಡಿತ್ತು. ಬೌಲರ್‌ಗಳು ಕೆಟ್ಟ ದಾಳಿ ಮಾಡಿದ್ದರೆ, ಬ್ಯಾಟರ್‌ಗಳು ಶಕ್ತಿ ಕುಂದಿದಂತೆ ಆಟವಾಡುತ್ತಿದ್ದಾರೆ.
ಕೊಹ್ಲಿ, ರೋಹಿತ್ ಸೇರಿ ಟೀಂ ಇಂಡಿಯಾ ಕ್ರಿಕೆಟಿಗ ಹೋಳಿ ಸಂಭ್ರಮ, ವಿಡಿಯೋ ವೈರಲ್!
ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್‌ಗಳ ಸೋಲು ಕಂಡಿದ್ದರೆ, ಟೇಬಲ್ ಟಾಪರ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಸೋಮವಾರ ನಡೆದ 2ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತ್ತು. ಹಾಗಾಗಿ ಆರ್‌ಸಿಬಿ ತಂಡಕ್ಕೆ ಮುಂದಿನ ಪಂದ್ಯಗಳು ಬಹಳ ಪ್ರಮುಖವಾಗಿದೆ. ಹೊಸ ತಂಡ ಯುಪಿ ವಾರಿಯರ್ಸ್ ಈಗಾಗಲೇ ಒಂದು ಪಂದ್ಯದಲ್ಲಿ ಗೆಲುವು ಕಂಡಿದ್ದರೆ, ದೆಹಲಿ ಹಾಗೂ ಮುಂಬೈ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿವೆ. ಟೇಬಲ್ ಟಾಪರ್‌ಗಳು ತಂಡಗಳು ನೇರವಾಗಿ ಪ್ಲೇಆಫ್‌ಗೆ ಏರಲಿದ್ದರೆ, 2 ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಕಾದಾಟ ನಡೆಸಲಿದೆ.
