ಐಪಿಎಲ್ ಟೂರ್ನಿ ದಿನದಿದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಮತ್ತೆ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಆತಂಕ ಶುರುವಾಗಿದೆ. ಇದೀಗ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್‌ನನ್ನು ಬುಕ್ಕಿಗಳು ಸಂಪರ್ಕ ಮಾಡಿರುವ ಕುರಿತು ಮಹತ್ವದ ಮಾಹಿತಿಯನ್ನು ಖುದ್ದು ಸಿರಾಜ್ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. 

ಮುಂಬೈ(ಏ.19): ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದೆ. ಇದರ ನಡುವೆ ಕಳ್ಳಾಟದ ಆತಂಕ ಕಾಡುತ್ತಿದೆ. ಇದೀಗ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್, ಬಿಸಿಸಿಐಗೆ ನೀಡಿರುವ ಮಾಹಿತಿ ಬಹಿರಂಗವಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ವೇಳೆ ಕೆಲ ಬುಕ್ಕಿಗಳು ತಂಡದೊಳಗಿನ ಮಾಹಿತಿ ಪಡೆಯಲು ಮೊಹಮ್ಮದ್ ಸಿರಾಜ್ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಖುದ್ದು ಮೊಹಮ್ಮದ್ ಸಿರಾಜ್, ಬಿಸಿಸಿಐ ಭ್ರಷ್ಟಾಚಾರ ವಿರೋಧಿ ದಳಕ್ಕೆ(ACU) ಮಾಹಿತಿ ರವಾನಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವ ACU ಸಿರಾಜ್ ಬಳಿ ಮಾಹಿತಿ ಪಡೆಯಲು ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‌ನಿಂದ ಈಗಾಗಲೇ ಭಾರತೀಯ ಕ್ರಿಕೆಟ್ ಅತೀ ದೊಡ್ಡ ಹಿನ್ನಡೆ ಅನುಭವಿಸಿದೆ. ಹೀಗಾಗಿ ಬಿಸಿಸಿಐ ಪಂದ್ಯಗಳನ್ನು ಕಳ್ಳಾಟದಿಂದ ಮುಕ್ತಗೊಳಿಸಲು ಪ್ರತ್ಯೇಕ ಭ್ರಷ್ಟಾಚಾರ ವಿರೋಧಿ ದಳಕ್ಕೆ ಹೆಚ್ಚಿನ ಅಧಿಕಾರ ನೀಡಿದೆ. ಈ ದಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ವೇಳೆ ಹೈದರಾಬಾದ್‌ನ ಚಾಲಕನೋರ್ವ ಸಿರಾಜ್ ಸಂಪರ್ಕಿಸಿ ಟೀಂ ಇಂಡಿಯಾ ಮಾಹಿತಿ ಪಡೆಯುವ ಯತ್ನ ಮಾಡಿದ್ದಾರೆ. ಈ ಚಾಲಕ ಬೆಟ್ಟಿಂಗ್ ಮೂಲಕ ಅಪಾರ ಹಣ ಕಳೆದುಕೊಂಡಿದ್ದ. ಹೀಗಾಗಿ ತಾನು ಕಳೆದುಕೊಂಡಿರುವ ಹಣವನ್ನು ಬೆಟ್ಟಿಂಗ್ ಮೂಲಕವೇ ಗಳಿಸಲು ಸಿರಾಜ್ ಸಂಪರ್ಕಿಸಿ, ಕೆಲ ಮಾಹಿತಿ ಪಡೆಯುವ ಪ್ರಯತ್ನ ಮಾಡಿದ್ದ.

'ಬೇರೆ ಫ್ರಾಂಚೈಸಿಗೆ ಸೇರುವ ಮನಸ್ಸು ಮಾಡಿದ್ದೆ...' ಆರ್‌ಸಿಬಿ ಕುರಿತು ಕೊಹ್ಲಿ ಬಾಂಬ್‌!

ಚಾಲಕನ ಸಂಪರ್ಕಿಸಿದ ಬೆನ್ನಲ್ಲೇ ಮೊಹಮ್ಮದ್ ಸಿರಾಜ್, ಈ ಮಾಹಿತಿಯನ್ನು ACU ನೀಡಿದ್ದಾರೆ. ತಕ್ಷಣವೇ ACU ಘಟನೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಇದೀಗ ಹೈದರಾಬಾದ್ ಮೂಲದ ಚಾಲಕನನ್ನು ಬಿಸಿಸಿಐ ACU ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಮೊಹಮ್ಮದ್ ಸಿರಾಜ್ ಸಂಪರ್ಕಿಸಿದ ವ್ಯಕ್ತಿ ಬುಕ್ಕಿ ಅಲ್ಲ, ಆತ ಓರ್ವ ಚಾಲಕ. ಆದರೆ ಕ್ರಿಕೆಟ್ ಬೆಟ್ಟಿಂಗ್ ಮೂಲಕ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಬೆಟ್ಟಿಂಗ್ ಮೂಲಕವೇ ಹಣಗಳಿಸಲು ಮೊಹಮ್ಮದ್ ಸಿರಾಜ್ ಸಂಪರ್ಕಿಸಿ ಮಾಹಿತಿ ಪಡೆಯಲು ಯತ್ನಿಸಿದ್ದ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಆದರೆ ಈ ಪ್ರಕರಣದಲ್ಲಿ ಮತ್ತಷ್ಟು ತನಿಖೆ ನಡಯೆಲಿದೆ ಎಂದು ಎಸಿಯು ಹೇಳಿದೆ.

ಫಿಕ್ಸಿಂಗ್ ಸೇರಿದಂತೆ ಯಾವುದೇ ಕಳ್ಳಾಟಕ್ಕೆ ಬುಕ್ಕಿಗಳು ಅಥವಾ ಯಾರೇ ವ್ಯಕ್ತಿಗಳು ಕ್ರಿಕೆಟಿಗರನ್ನು ಸಂಪರ್ಕಿಸಿದರೆ, ತಕ್ಷಣವೇ ಈ ಮಾಹಿತಿಯನ್ನು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ದಳಕ್ಕೆ ಮಾಹಿತಿ ನೀಡಬೇಕು. ಇದು ಐಸಿಸಿ ನಿಯಮ. ಆಯಾ ಕ್ರಿಕೆಟ್ ಸಂಸ್ಥೆಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಂತೆ ಮೊಹಮ್ಮದ್ ಸಿರಾಜ್ , ಎಸಿಯುಗೆ ಮಾಹಿತಿ ನೀಡಿದ್ದಾರೆ. 

IPL 2023: ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರರ ಬ್ಯಾಟ್‌, ಲಕ್ಷಾಂತರ ಬೆಲೆಬಾಳುವ ಕಿಟ್‌ ಕಳ್ಳತನ, ತನಿಖೆ ಆರಂಭ!

2013ರಲ್ಲಿ ಭಾರತ ಕ್ರಿಕೆಟ್ ಎರಡನೇ ಬಾರಿಗೆ ಫಿಕ್ಸಿಂಗ್ ಮುಜುಗರಕ್ಕೆ ಒಳಗಾಗಿತ್ತು. ಎಸ್ ಶ್ರೀಶಾಂತ್, ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚವ್ಹಾಣ್ ಮೂವರು ಕ್ರಿಕೆಟಿಗರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧಿಸಲಾಗಿತ್ತು. ಇತ್ತ ಸಿಎಸ್‌ಕೆ ತಂಡದ ಸಿಬ್ಬಂದಿ ಗುರುನಾಥ್ ಮೇಯಪ್ಪನ್‌ನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ತರ ಬದಲಾವಣೆಯಾಗಿದೆ. ಬುಕ್ಕಿಗಳು ಸಂಪರ್ಕ ಮಾಡಿದ ಮಾಹಿತಿಯನ್ನು ಭ್ರಷ್ಟಾಚಾರ ವಿರೋಧಿ ದಳಕ್ಕೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದ ಕಾರಣಕ್ಕಾಗಿ 2019ರಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್‌ನನ್ನು ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧ ಮಾಡಲಾಗಿತ್ತು.