ಐಪಿಎಲ್ ಗೆಲುವಿನ ಹಸಿವಿನಲ್ಲಿರುವ ಆರ್‌ಸಿಬಿ, ದುಬಾರಿ ಮೊತ್ತಕ್ಕೆ ಖರೀದಿಸಿದ ಫಿಲ್ ಸಾಲ್ಟ್ ಕಳಪೆ ಫಾರ್ಮ್ ನಿಂದ ಚಿಂತೆಗೀಡಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ೨೦ ಸರಣಿಯಲ್ಲಿ ಸಾಲ್ಟ್ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಸಾಲ್ಟ್ ಫಾರ್ಮ್ ಆರ್‌ಸಿಬಿ ಗೆಲುವಿಗೆ ನಿರ್ಣಾಯಕ.
ಬೆಂಗಳೂರು: ಕಳೆದ 17 ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಂಡಿದ್ದರೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗಿದೆ. ಮುಂಬರುವ ಮಾರ್ಚ್ 21ರಿಂದ 2025ರ ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಸಾಕಷ್ಟು ನಂಬಿಕೆಯಿಟ್ಟ ಖರೀದಿಸಿದ ಆಟಗಾರ ಐಪಿಎಲ್ ಹತ್ತಿರವಾಗುತ್ತಿದ್ದಂತೆಯೇ ಫಾರ್ಮ್ ಕಳೆದುಕೊಂಡಿರುವುದು ಆರ್‌ಸಿಬಿ ಫ್ರಾಂಚೈಸಿ ತಲೆನೋವು ಹೆಚ್ಚುವಂತೆ ಮಾಡಿದೆ. ಇದೀಗ ಆರ್‌ಸಿಬಿ ಅಭಿಮಾನಿಗಳಿಗೆ ಹರಾಜಿನಲ್ಲಿ ತಮ್ಮ ಫ್ರಾಂಚೈಸಿ ಮಹಾ ಎಡವಟ್ಟು ಮಾಡಿತಾ ಎನ್ನುವ ಅನುಮಾನ ಶುರುವಾಗಲಾರಂಭಿಸಿದೆ.
ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಇಲ್ಲಿಯವರೆಗೆ ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಆತಿಥೇಯ ಭಾರತ 2 ಹಾಗೂ ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಕಳೆದ ಮೂರು ಪಂದ್ಯಗಳಲ್ಲಿಯೂ ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿರುವುದು ಆರ್‌ಸಿಬಿ ತಲೆನೋವು ಹೆಚ್ಚುವಂತೆ ಮಾಡಿದೆ.
IPL 2025 ಟೂರ್ನಿಯಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ ಈ 5 ಫಾರಿನ್ ಪ್ಲೇಯರ್ಸ್! ಈ ಪಟ್ಟಿಯಲ್ಲಿದ್ದಾನೆ RCB ಆಟಗಾರ
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಾಕಷ್ಟು ನಂಬಿಕೆಯಿಟ್ಟು ಫಿಲ್ ಸಾಲ್ಟ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಭಾರತ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸಾಲ್ಟ್ 7 ರನ್ ಗಳಿಸಿದ್ದಾರೆ. ಇನ್ನು ಕಳೆದ ಮೂರು ಪಂದ್ಯಗಳಿಂದ ಫಿಲ್ ಸಾಲ್ಟ್ ಇದುವರೆಗೂ ಗಳಿಸಿದ್ದು ಕೇವಲ 9 ರನ್ ಮಾತ್ರ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಫಿಲ್ ಸಾಲ್ಟ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಕೆಕೆಆರ್ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಹೀಗಿದ್ದೂ ಕೆಕೆಆರ್ ಫ್ರಾಂಚೈಸಿಯು ಫಿಲ್ ಸಾಲ್ಟ್ ಅವರನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಲೀಸ್ ಮಾಡಿತ್ತು. ಇನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಬರೋಬ್ಬರಿ 11.50 ಕೋಟಿ ರುಪಾಯಿ ನೀಡಿ ಫಿಲ್ ಸಾಲ್ಟ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಆರ್‌ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ಅವರ ಈಗಿನ ಫಾರ್ಮ್ ಚಿಂತಾಕ್ರಾಂತರನ್ನಾಗಿಸಿದೆ.
ರಾಜ್‌ಕೋಟಲ್ಲಿ ಈಡೇರದ ಭಾರತದ ಟಿ20 ಸರಣಿ ಜಯದ ಆಸೆ!
ಒಂದು ವೇಳೆ ಇದೇ ರೀತಿಯ ಫಾರ್ಮ್ ಅನ್ನು ಮುಂಬರುವ ಐಪಿಎಲ್ ಟೂರ್ನಿಯಲ್ಲೂ ಫಿಲ್ ಸಾಲ್ಟ್ ಮುಂದುವರೆಸಿದರೆ, ಖಂಡಿತ ಆರ್‌ಸಿಬಿ ತಂಡವು ಕಪ್ ಗೆಲ್ಲುವುದು ಕನಸಿನ ಮಾತಾಗುವ ಸಾಧ್ಯತೆಯಿದೆ. ಮುಂಬರುವ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಫಿಲ್ ಸಾಲ್ಟ್ ಆದಷ್ಟು ಬೇಗ ಫಾರ್ಮ್ ಕಂಡುಕೊಳ್ಳಲಿ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಡಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.
