ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 26 ರನ್‌ಗಳಿಂದ ಸೋತಿತು. ಲಿವಿಂಗ್‌ಸ್ಟೋನ್‌ರ 43 ರನ್‌, ಕೊನೆಯ ವಿಕೆಟ್‌ ಜೊತೆಯಾಟದ 24 ರನ್‌ಗಳು ಇಂಗ್ಲೆಂಡ್‌ಗೆ ಸ್ಪರ್ಧಾತ್ಮಕ ಮೊತ್ತ ತಂದುಕೊಟ್ಟವು. ವರುಣ್ 5 ವಿಕೆಟ್‌ ಪಡೆದರೂ ಭಾರತದ ಬ್ಯಾಟಿಂಗ್‌ ವೈಫಲ್ಯ ಸೋಲಿಗೆ ಕಾರಣವಾಯಿತು. ಸರಣಿಯಲ್ಲಿ ಭಾರತ 2-1 ಮುನ್ನಡೆ ಹೊಂದಿದೆ.

ರಾಜ್‌ಕೋಟ್‌: ಎರಡು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಳ್ಳುವ ಭಾರತದ ಯೋಜನೆ ಕೈಹಿಡಿಯಲಿಲ್ಲ. ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇಂಗ್ಲೆಂಡ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 26 ರನ್‌ ಸೋಲು ಎದುರಾಯಿತು. ವರುಣ್‌ ಚಕ್ರವರ್ತಿ ಅವರ ಅಮೋಘ ಬೌಲಿಂಗ್‌ ಪ್ರದರ್ಶನ ಇಂಗ್ಲೆಂಡನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವ ಅವಕಾಶವನ್ನು ಒದಗಿಸಿತ್ತಾದರೂ, ಇನ್ನಿಂಗ್ಸ್‌ನ ಕೊನೆಯ ಭಾಗದಲ್ಲಿ ಲಿಯಾಮ್‌ ಲಿವಿಂಗ್‌ಸ್ಟನ್‌ರ ಸ್ಫೋಟಕ ಆಟ, ಕೊನೆಯ ವಿಕೆಟ್‌ಗೆ ಸಿಕ್ಕ 24 ರನ್‌ ಜೊತೆಯಾಟ, ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಿರೀಕ್ಷಿತ ಮಟ್ಟದಲ್ಲಿ ಇಬ್ಬನಿ ಬೀಳದೆ ಇದ್ದಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣ ಎನಿಸಿತು.

ಸತತ 3ನೇ ಪಂದ್ಯದಲ್ಲೂ ಟಾಸ್‌ ಗೆದ್ದ ಭಾರತ, ಮೊದಲು ಇಂಗ್ಲೆಂಡನ್ನು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ಬೆನ್‌ ಡಕೆಟ್‌ ಸ್ಫೋಟಕ ಆರಂಭ ಒದಗಿಸಿದರು. 28 ಎಸೆತದಲ್ಲಿ 51 ರನ್‌ ಸಿಡಿಸಿ ಔಟಾದರು. ಬಟ್ಲರ್‌ 24 ರನ್‌ ಕೊಡುಗೆ ನೀಡಿ ಪೆವಿಲಿಯನ್‌ ಸೇರಿದರು. ಇಂಗ್ಲೆಂಡ್‌ಗೆ ವರುಣ್‌ರ ಮಾಂತ್ರಿಕ ಸ್ಪೆಲ್‌ ಮಾರಕವಾಯಿತು.

ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧರಿಸುವ ಪವರ್‌ಫುಲ್ ವ್ಯಕ್ತಿ ಇವರೇ ನೋಡಿ!

16ನೇ ಓವರಲ್ಲಿ 127 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್‌ಗೆ ಆಸರೆಯಾಗಿದ್ದು ಲಿವಿಂಗ್‌ಸ್ಟೋನ್‌. 24 ಎಸೆತದಲ್ಲಿ 1 ಬೌಂಡರಿ, 5 ಸಿಕ್ಸರ್‌ನೊಂದಿಗೆ 43 ರನ್‌ ಚಚ್ಚಿದರು. ಲಿವಿಂಗ್‌ಸ್ಟೋನ್‌ ಔಟಾದಾಗ ತಂಡದ ಮೊತ್ತ 17.1 ಓವರಲ್ಲಿ 147 ರನ್‌.

Scroll to load tweet…

10ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ಆದಿಲ್‌ ರಶೀದ್‌ ಹಾಗೂ ಮಾರ್ಕ್‌ ವುಡ್‌, 24 ರನ್‌ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ತಲುಪುವಂತೆ ನೋಡಿಕೊಂಡರು. ಈ ಜೊತೆಯಾಟ ಭಾರತವನ್ನು ಒತ್ತಡಕ್ಕೆ ಸಿಲುಕಿಸಿತು. ವರುಣ್‌ 4 ಓವರಲ್ಲಿ 24 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು.

ಮತ್ತೆ ಕೈಕೊಟ್ಟ ಸಂಜು, ಸೂರ್ಯ: ಭಾರತಕ್ಕೆ ಆರಂಭಿಕ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಆಸರೆಯಾಗಲಿಲ್ಲ. ಸಂಜು 3 ರನ್‌ಗೆ ಔಟಾದರೆ, ಅಭಿಷೇಕ್‌ ಶರ್ಮಾ 24 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಸೂರ್ಯ 14 ರನ್‌ಗೆ ವಿಕೆಟ್‌ ಕಳೆದುಕೊಂಡರು. 2ನೇ ಪಂದ್ಯದಲ್ಲಿ ಭಾರತವನ್ನು ದಡ ಸೇರಿಸಿದ್ದ ತಿಲಕ್‌ ವರ್ಮಾ 18 ರನ್‌ ಗಳಿಸಿ ಹೊರನಡೆದರು. 68 ರನ್‌ಗೆ ಭಾರತ 4 ವಿಕೆಟ್‌ ಕಳೆದುಕೊಂಡಿತು.

ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯದ ಭಾರತದ ಸಂಭಾವ್ಯ ತಂಡ; ಬದಲಾವಣೆ ಮಾಡುತ್ತಾ ಟೀಂ ಇಂಡಿಯಾ?

ವಾಷಿಂಗ್ಟನ್‌ ಸುಂದರ್‌ 6 ರನ್‌ ಗಳಿಸಲು 15 ಎಸೆತ ವ್ಯರ್ಥ ಮಾಡಿದರೆ, 40 ರನ್‌ ಗಳಿಸಲು ಹಾರ್ದಿಕ್‌ ಪಾಂಡ್ಯ 35 ಎಸೆತ ತೆಗೆದುಕೊಂಡರು. ಅಕ್ಷರ್‌ ಪಟೇಲ್‌, ಧೃವ್‌ ಜುರೆಲ್‌ರಿಂದಲೂ ಹೋರಾಟ ಮೂಡಿಬರಲಿಲ್ಲ.

ಭಾರತ 20 ಓವರಲ್ಲಿ 9 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್‌ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸರಣಿಯಲ್ಲಿ ಭಾರತ 2-1ರ ಮುನ್ನಡೆ ಹೊಂದಿದ್ದು, ಮುಂದಿನ ಪಂದ್ಯ ಶುಕ್ರವಾರ (ಜ.31) ಪುಣೆಯಲ್ಲಿ ನಡೆಯಲಿದೆ.

ಸ್ಕೋರ್‌: ಇಂಗ್ಲೆಂಡ್‌ 20 ಓವರಲ್ಲಿ 171/9 (ಡಕೆಟ್‌ 51, ಲಿವಿಂಗ್‌ಸ್ಟೋನ್‌ 43, ವರುಣ್‌ 5-24), ಭಾರತ 20 ಓವರಲ್ಲಿ 146/9 (ಹಾರ್ದಿಕ್‌ 40, ಅಭಿಷೇಕ್‌ 24, ಓವರ್‌ಟನ್‌ 3-24, ರಶೀದ್‌ 1-15)