ವೆಲ್ಲಿಂಗ್ಟನ್(ಫೆ.17): ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ವಿಶ್ವ ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸೋಮವಾರ(ಫೆ.17) 36ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಎಬಿಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

ತಮ್ಮ ಅಮೋಘ ಪ್ರದರ್ಶನದ ಮೂಲಕ ಜಗತ್ತಿನ ನಾನಾ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಎಬಿ ಡಿವಿಲಿಯರ್ಸ್, ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರಸ್ತಂಭ ಎನಿಸಿರುವ ಎಬಿಡಿಗೆ ಕರ್ನಾಟಕದಲ್ಲೂ ಅಪಾರ ಅಭಿಮಾನಿಗಳಿದ್ದಾರೆ.  ಇನ್ನು ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಸಹಪಾಠಿ ಎಬಿ ಡಿವಿಲಿಯರ್ಸ್‌ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಎಬಿಡಿ-ಕೊಹ್ಲಿ ಜೋಡಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಹಲವಾರು ಸ್ಮರಣೀಯ ಜತೆಯಾಟದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.  ಇದೇ ಮಾರ್ಚ್ 29ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಆಡಲು ಕೊಹ್ಲಿ- ಎಬಿಡಿ ತುದಿಗಾಲಿನಲ್ಲಿ ನಿಂತಿದ್ದಾರೆ. 

ಹುಟ್ಟುಹಬ್ಬದಂದೇ ಎಬಿ ಡಿವಿಲಿಯರ್ಸ್‌ನಿಂದ ಗುಡ್ ನ್ಯೂಸ್..?

2020ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, 'ಹುಟ್ಟು ಹಬ್ಬದ ಶುಭಾಶಯಗಳು ಸಹೋದರ. ಎಲ್ಲಾ ಸುಖ ಸಂತೋಷ, ಆರೋಗ್ಯಪೂರ್ಣ ಹಾಗೂ ಸುಂದರ ಜೀವನ ನಿನ್ನದಾಗಲಿ. ಆದಷ್ಟು ಬೇಗ ಭೇಟಿಯಾಗೋಣ' ಎಂದು ಎಬಿಡಿಗೆ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ. 

ಕ್ರಿಕೆಟ್ ಜಗತ್ತು ಕಂಡ ಅತ್ಯಂತ ವಿಧ್ವಂಸಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿರುವ ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸೇರಿದಂತೆ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 218 ಏಕದಿನ ಹಾಗೂ 78 ಟಿ20 ಪಂದ್ಯಗಳಿಂದ 20 ಸಾವಿರಕ್ಕೂ ಅಧಿಕ ರನ್ ಬಾರಿಸಿರುವ ಎಬಿಡಿ, 2018ರ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ್ದರು. ಇದೀಗ ಸದ್ಯದಲ್ಲೇ ನಿವೃತ್ತಿ ಹಿಂಪಡೆದು ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 

ನಾಯಕ ವಿರಾಟ್ ಕೊಹ್ಲಿ ಮಾತ್ರವಲ್ಲದೇ ಸುರೇಶ್ ರೈನಾ, ಕೆ.ಎಲ್. ರಾಹುಲ್ ಸೇರಿದಂತೆ ಹಲವು ಕ್ರಿಕೆಟಿಗರು ಎಬಿಡಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.