ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ರಾಯಘಡ ರಾಯಲ್ಸ್ ಮತ್ತು ಕೊಲ್ಲಾಪುರ ಟಸ್ಕರ್ಸ್ ನಡುವಿನ ಪಂದ್ಯದಲ್ಲಿ ನಡೆದ ವಿಚಿತ್ರ ರನೌಟ್ ಘಟನೆ ಗಲ್ಲಿ ಕ್ರಿಕೆಟ್‌ನ್ನು ನೆನಪಿಸಿತು. ಎರಡು ಬಾರಿ ರನೌಟ್ ಅವಕಾಶವನ್ನು ಕೈಚೆಲ್ಲಿದ ಫೀಲ್ಡಿಂಗ್ ತಂಡ, ಚೆಂಡನ್ನು ಓವರ್‌ಥ್ರೋ ಮಾಡಿ ಬೌಂಡರಿ ನೀಡಿತು.
ಮುಂಬೈ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಭರ್ಜರಿಯಾಗಿ ಸಾಗುತ್ತಿದೆ. ಈ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಘಡ ರಾಯಲ್ಸ್ ಹಾಗೂ ಕೊಲ್ಲಾಪುರ ಟಸ್ಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನಡೆದ ಒಂದು ಸನ್ನಿವೇಷ ಅಕ್ಷರಶಃ ಗಲ್ಲಿ ಕ್ರಿಕೆಟ್ ನೆನಪಿಸುವಂತಿತ್ತು. ಈ ರನೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರನೌಟ್ ವಿಡಿಯೋ ವೈರಲ್
ಅಂದಹಾಗೆ ರಾಯಘಡ ರಾಯಲ್ಸ್ ತಂಡವು ಬ್ಯಾಟಿಂಗ್ ಮಾಡುತ್ತಿತ್ತು. ಈ ವೇಳೆ ಬ್ಯಾಟರ್‌ಗಳು ಎರಡನೇ ರನ್ ಕದಿಯುವ ಧಾವಂತದಲ್ಲಿ ಒಬ್ಬರನ್ನೊಬ್ಬರು ಡಿಕ್ಕಿಯಾಗಿ ಬಿದ್ದರು. ಆಗ ಕ್ಷೇತ್ರರಕ್ಷಕ ಚೆಂಡನ್ನು ವಿಕೆಟ್ ಕೀಪರ್‌ಗೆ ಎಸೆದ. ವಿಕೆಟ್ ಕೀಪರ್ ಅನಾಯಾಸವಾಗಿ ಚೆಂಡನ್ನು ವಿಕೆಟ್‌ಗೆ ಮುಟ್ಟಿಸಿದ್ದರೇ ಔಟ್ ಆಗುತ್ತಿದ್ದ. ಆದರೆ ಆ ವಿಕೆಟ್ ಕೀಪರ್ ನಾನ್‌ಸ್ಟ್ರೈಕರ್‌ನತ್ತ ಚೆಂಡು ಎಸೆಯುತ್ತಾನೆ. ಆಗ ನಾನ್‌ಸ್ಟ್ರೈಕ್‌ನಲ್ಲಿದ್ದ ಬೌಲರ್ ಚೆಂಡು ಹಿಡಿಯಲು ಗಲಿಬಿಲಿ ಮಾಡುತ್ತಾನೆ. ಅಷ್ಟರಲ್ಲಾಗಲೇ ಎಚ್ಚೆತ್ತುಕೊಂಡ ಬ್ಯಾಟರ್ ಕ್ರೀಸ್ ಒಂದು ಬದಿ ಸುರಕ್ಷಿತವಾಗಿ ತಲುಪುತ್ತಾನೆ. ಈ ಅವಕಾಶ ಕೈಚೆಲ್ಲಿದ ಫೀಲ್ಡಿಂಗ್ ತಂಡ ಮತ್ತೆ ಸ್ಟ್ರೈಕ್ ಕಡೆ ರನೌಟ್‌ಗೆ ಮುಂದಾಗುತ್ತಾರೆ. ಆಗಲು ವಿಕೆಟ್‌ಗೆ ಎಸೆಯುವ ಅವಕಾಶ ಕೈಚೆಲ್ಲುತ್ತಾನೆ. ಇನ್ನು ಡೈರೆಕ್ಟ್ ಹಿಟ್ ಮಾಡುವ ಯತ್ನದಲ್ಲಿ ಚೆಂಡು ಓವರ್ ಥ್ರೋ ಆಗಿ ಬೌಂಡರಿ ಗೆರೆ ಸೇರುತ್ತದೆ. ಎರಡೆರಡು ಸಲ ರನೌಟ್ ಮಾಡುವ ಅವಕಾಶವಿದ್ದರೂ ಫೀಲ್ಡಿಂಗ್ ತಂಡ ಅವಕಾಶ ವಂಚಿತವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಬಿದ್ದು ಬಿದ್ದು ನಗುವಂತೆ ಮಾಡಿದೆ.
ಹೀಗಿತ್ತೂ ನೋಡಿ ಆ ಕ್ಷಣ:
ರಾಯಘಡ ರಾಯಲ್ಸ್‌ಗೆ ಭರ್ಜರಿ ಗೆಲುವು:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಲಾಪುರ ಟಸ್ಕರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್‌ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು. ಕೊಲ್ಲಾಪುರ ಟಸ್ಕರ್ಸ್ ಪರ ಅಂಕಿತ್ ಭಾವ್ನೆ 57 ರನ್ ಸಿಡಿಸಿದರು. ಇನ್ನು ಸಿದ್ದಾರ್ಥ್ ಮಾಥ್ರೆ 31 ಹಾಗೂ ಆನಂದ್ 26 ರನ್ ಸಿಡಿಸಿದರು. ರಾಯಘಡ ರಾಯಲ್ಸ್ ಪರ ಬೌಲಿಂಗ್‌ನಲ್ಲಿ ನಿಖಿಲ್ ಕದಂ 4 ಓವರ್‌ನಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.
ಇನ್ನು 165 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಯಘಡ ರಾಯಲ್ಸ್ ತಂಡವು 19.4 ಓವರ್‌ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ರಾಯಘಡ ರಾಯಲ್ಸ್ ಪರ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ವಿಕ್ಕಿ ಓಸ್ವಾಲ್ ಕೇವಲ 54 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಮುಗಿಲೆತ್ತರದ ಸಿಕ್ಸರ್ ನೆರವಿನಿಂದ ಸ್ಪೋಟಕ 74 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಸಿದ್ದೇಶ್ವರ್ 34 ಎಸೆತಗಳಲ್ಲಿ 39 ರನ್ ಹಾಗೂ ನೀರಜ್ ಜೋಶಿ ಕೇವಲ 27 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನೀರಜ್ ಜೋಶಿ ಕೊನೆಯಲ್ಲಿ ಸ್ಪೋಟಕ ಇನ್ನಿಂಗ್ಸ್ ಆಡಿದರು. ನೀರಜ್ ಜೋಶಿ ಸೊಗಸಾದ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಎರಡು ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು. ಈ ಗೆಲುವಿನೊಂದಿಗೆ ರಾಯಘಡ ರಾಯಲ್ಸ್ ತಂಡವು ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇಂದು ಪುಣೇರಿ ಬಪ್ಪಾ ಹಾಗೂ ರಾಯಘಡ ರಾಯಲ್ಸ್ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಜೂನ್ 22ರಂದು ನಡೆಯಲಿರುವ ಫೈನಲ್‌ನಲ್ಲಿ ಈಗಲ್ ನಾಸಿಕ್ ಟೈಟಾನ್ಸ್ ಎದುರು ಪ್ರಶಸ್ತಿಗಾಗಿ ಕಾದಾಡಲಿದೆ.
