ನಾಗ್ಪುರ ಟೆಸ್ಟ್‌ನಲ್ಲಿ 400 ರನ್ ಬಾರಿಸಿ ಟೀಂ ಇಂಡಿಯಾ ಆಲೌಟ್ಆಸೀಸ್ ಎದುರು ಕೆಚ್ಚೆದೆಯ 84 ರನ್ ಸಿಡಿಸಿದ ಅಕ್ಷರ್ ಪಟೇಲ್ಮೊದಲ ಇನಿಂಗ್ಸ್‌ನಲ್ಲಿ ಒಟ್ಟಾರೆ 223 ರನ್‌ಗಳ ಮುನ್ನಡೆ ಗಳಿಸಿದ ಟೀಂ ಇಂಡಿಯಾ
ನಾಗ್ಪುರ(ಫೆ.11): ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಎಡಗೈ ಬ್ಯಾಟರ್‌ಗಳಾದ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಬಾರಿಸಿದ ಕೆಚ್ಚೆದೆಯ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 400 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಇನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡವು 223 ರನ್‌ಗಳ ಭರ್ಜರಿ ಮುನ್ನಡೆ ಪಡೆದಿದೆ.
ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಎರಡನೇ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದ ಆರಂಭದಲ್ಲೇ ರವೀಂದ್ರ ಜಡೇಜಾ ಅವರ ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ಜಡೇಜಾ ತನ್ನ ಖಾತೆಗೆ 4 ರನ್ ಸೇರಿಸಿ ಟೋಡ್ ಮರ್ಫಿಗೆ ಆರನೇ ಬಲಿಯಾದರು. ಜಡೇಜಾ 185 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ನಡುವಿನ ಎಂಟನೇ ವಿಕೆಟ್‌ಗೆ 88 ರನ್‌ಗಳ ಜತೆಯಾಟಕ್ಕೆ ಬ್ರೇಕ್ ಬಿದ್ದಿತು. ಇದು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಜತೆಯಾಟ ಎನಿಸಿಕೊಂಡಿತು.
ಇನ್ನು ರವೀಂದ್ರ ಜಡೇಜಾ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್ ಜತೆಗೂಡಿ 9ನೇ ವಿಕೆಟ್‌ಗೆ 52 ರನ್‌ಗಳ ಜತೆಯಾಟವಾಡುವ ಮೂಲಕ, ಆಸೀಸ್ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದರು. 6 ರನ್ ಗಳಿಸಿದ್ದಾಗ ಸಿಕ್ಕ ಜೀವದಾನ ಬಳಸಿಕೊಂಡ ಮೊಹಮ್ಮದ್ ಶಮಿ 47 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಅಕ್ಷರ್ ಪಟೇಲ್ ಅದ್ಭುತ ಬ್ಯಾಟಿಂಗ್: ಎರಡನೇ ದಿನದಾಟದಲ್ಲೇ ಆಕರ್ಷಕ ಅರ್ಧಶತಕ ಸಿಡಿಸಿದ ಅಕ್ಷರ್ ಪಟೇಲ್, ಮೂರನೇ ದಿನದಾಟದಲ್ಲೂ ಸಮಯೋಚಿತ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಶಮಿ ಹಾಗೂ ಸಿರಾಜ್ ಜತೆಗೂಡಿ ತಂಡದ ಮೊತ್ತವನ್ನು ನಾನೂರರ ಗಡಿ ತಲುಪಿಸುವಲ್ಲಿ ಯಶಸ್ವಿಯಾದರು. ಅಕ್ಷರ್ ಪಟೇಲ್ ಒಟ್ಟು 174 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 84 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. 84 ರನ್ ಅಕ್ಷರ್ ಪಟೇಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಕೈಗೆ ಹಚ್ಚಿದ ಕ್ರೀಮ್ ಮಾಹಿತಿ ಬಹಿರಂಗ!
ಟೋಡ್ ಮರ್ಫಿ ಖಾತೆಗೆ 7 ವಿಕೆಟ್: ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾದ 22 ವರ್ಷದ ಆಫ್‌ಸ್ಪಿನ್ನರ್ ಟೋಡ್ ಮರ್ಫಿ, ಎರಡನೇ ದಿನದಲ್ಲೇ 5 ವಿಕೆಟ್ ಕಬಳಿಸುವ ಮೂಲಕ, ಆಸ್ಟ್ರೇಲಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ 5+ ವಿಕೆಟ್ ಕಬಳಿಸಿದ ಕಿರಿಯ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಇದೀಗ ಮೂರನೇ ದಿನದಾಟದ ಆರಂಭದಲ್ಲೇ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ರವೀಂದ್ರ ಜಡೇಜಾ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿ ಶಮಿ ವಿಕೆಟ್ ತಮ್ಮ ಖಾತೆಗೆ ಹಾಕಿಕೊಳ್ಳುವಲ್ಲಿ ಮರ್ಪಿ ಯಶಸ್ವಿಯಾದರು.
