ಅಡಿಲೇಡ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್‌ನ ಎರಡನೇ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪು ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಿಚೆಲ್ ಮಾರ್ಷ್ ವಿಕೆಟ್‌ಗೆ ಸಂಬಂಧಿಸಿದಂತೆ ಥರ್ಡ್ ಅಂಪೈರ್ ನೀಡಿದ ತೀರ್ಪು ಚರ್ಚೆಗೆ ಗ್ರಾಸವಾಗಿದೆ.
ಅಡಿಲೇಡ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಅಡಿಲೇಡ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆಯಲ್ಲಿ ಟೀಂ ಇಂಡಿಯಾಗೆ ಅನ್ಯಾಯವಾಗುವಂತ ಪ್ರಕರಣ ನಡೆದಿದೆ. ಥರ್ಡ್ ಅಂಪೈರ್ ನೀಡಿದ ಒಂದು ತೀರ್ಪು ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಟೀಂ ಇಂಡಿಯಾವನ್ನು 180 ರನ್‌ಗಳಿಗೆ ಕಟ್ಟಿಹಾಕಿರುವ ಆಸ್ಟ್ರೇಲಿಯಾ ತಂಡವು ಇದೀಗ ದೊಡ್ಡ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಹೀಗಿರುವಾಗಲೇ ಕಾಂಗರೂ ನೆಲದಲ್ಲಿ ಥರ್ಡ್ ಅಂಪೈರ್, ಭಾರತೀಯರಿಗೆ ಅನ್ಯಾಯವಾಗುವಂತಹ ತೀರ್ಪು ನೀಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಥರ್ಡ್ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ:
ಹೌದು ಮಾರ್ನಸ್ ಲಬುಶೇನ್ ಅವರ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಮಿಚೆಲ್ ಮಾರ್ಷ್ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ನಿಗಟ್ಟುವ ಅವಕಾಶವಿತ್ತು. ಭಾರತ ಪರ ರವಿಚಂದ್ರನ್ ಅಶ್ವಿನ್ ಎಸೆದ 58ನೇ ಓವರ್‌ನಲ್ಲಿ ಥರ್ಡ್ ಅಂಪೈರ್ ವಿವಾದಾತ್ಮಕ ತೀರ್ಪು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಓವರ್‌ನ ಮೂರನೇ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಎಲ್‌ಬಿಡಬ್ಲ್ಯೂಗೆ ಬಲವಾದ ಮನವಿ ಸಲ್ಲಿಸಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಆಗ ಅವರು ಡಿಆರ್‌ಎಸ್ ಮೊರೆ ಹೋದರು. ರಿಪ್ಲೇನಲ್ಲಿ ಚೆಂಡು ಮೊದಲು ಮಿಚೆಲ್ ಮಾರ್ಷ್ ಪ್ಯಾಡ್‌ಗೆ ಬಡಿದುಮ ಆ ಬಳಿಕ ಬ್ಯಾಟ್‌ಗೆ ತಗುಲಿರುವುದು ಸ್ಪಷ್ಟವಾಗುತ್ತಿತ್ತು. ಹೀಗಿದ್ದೂ ಥರ್ಡ್ ಅಂಪೈರ್ ನಾಟೌಟ್ ನೀಡಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು.
ಅಂಡರ್-19 ಏಷ್ಯಾಕಪ್: ಗುಡುಗಿದ 13 ವರ್ಷದ ವೈಭವ್ ಸೂರ್ಯವನ್ಶಿ, ಲಂಕಾವನ್ನು ಬಗ್ಗುಬಡಿದು ಭಾರತ ಫೈನಲ್‌ಗೆ ಲಗ್ಗೆ
ಕೊನೆಗೂ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ ಮಾರ್ಷ್: ಮೊದಲಿಗೆ ಜೀವದಾನ ಪಡೆದುಕೊಂಡ ಮಿಚೆಲ್ ಮಾರ್ಷ್, ಭಾರತಕ್ಕೆ ಹೆಚ್ಚು ಅಪಾಯ ಮಾಡಲಿಲ್ಲ. ಮಿಚೆಲ್ ಮಾರ್ಷ್ 9 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
