ಧೋನಿ-ರೋಹಿತ್ ಇಬ್ಬರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್: ಅಚ್ಚರಿ ಉತ್ತರ ಕೊಟ್ಟ ಮಾಜಿ ಕೋಚ್ ರವಿಶಾಸ್ತ್ರಿ..!
ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಈ ಇಬ್ಬರಲ್ಲಿ ಯಾರು ಬೆಸ್ಟ್ ನಾಯಕ ಎನ್ನುವ ಪ್ರಶ್ನೆಗೆ ರವಿಶಾಸ್ತ್ರಿ ಅಚ್ಚರಿಯ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇತ್ತೀಚೆಗಷ್ಟೇ ಜರುಗಿದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಕಳೆದೊಂದು ದಶಕದ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಭಾರತದ ಅತ್ಯುತ್ತಮ ನಾಯಕ ಯಾರು ಎನ್ನುವ ಚರ್ಚೆ ಶುರುವಾಗಿದೆ. ಈ ಕುರಿತಂತೆ ಟೀಂ ಇಂಡಿಯಾ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ತುಟಿಬಿಚ್ಚಿದ್ದು, ಅಚ್ಚರಿಯ ಉತ್ತರ ನೀಡಿದ್ದಾರೆ.
ನಾಯಕತ್ವದ ವಿಚಾರಕ್ಕೆ ಬಂದರೆ ರೋಹಿತ್ ಶರ್ಮಾ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ರವಿಶಾಸ್ತ್ರಿ ಬಣ್ಣಿಸಿದ್ದಾರೆ. ಐಸಿಸಿ ರಿವ್ಯೂವ್ ಎಪಿಸೋಡ್‌ನಲ್ಲಿ ಭಾಗವಹಿಸಿ ಮಾತನಾಡಿದ ರವಿಶಾಸ್ತ್ರಿ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ತಂತ್ರಗಾರಿಕೆ ಹಾಗೂ ಕೌಶಲ್ಯತೆ ಅದ್ಭುತವಾಗಿದೆ ಎಂದು ಗುಣಗಾನ ಮಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿದ್ದಂತೆಯೇ ಭಾರತೀಯ ರೈಲ್ವೇಯಿಂದ ಡಬಲ್ ಪ್ರಮೋಷನ್..!
ರೋಹಿತ್ ಶರ್ಮಾ ಟಿ20 ನಾಯಕನಾಗಿ ಅತಿಹೆಚ್ಚು ಯಶಸ್ಸು ಕಂಡ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ 62 ಬಾರಿ ಭಾರತ ಟಿ20 ತಂಡವನ್ನು ಮುನ್ನಡೆಸಿ 49 ಬಾರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಟಿ20 ತಂಡವು 72 ಪಂದ್ಯಗಳನ್ನಾಡಿ 41 ಬಾರಿ ಗೆಲುವಿನ ನಗೆ ಬೀರಿತ್ತು. ಇಬ್ಬರೂ ನಾಯಕರು ಗಮನಾರ್ಹವಾದ ಯುದ್ದತಂತ್ರದ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟಸಾಧ್ಯವೆಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ತಂತ್ರಗಾರಿಕೆಯ ವಿಚಾರಕ್ಕೆ ಬಂದರೆ, ರೋಹಿತ್ ಶರ್ಮಾ ಅವರೊಬ್ಬ ಅದ್ಭುತ ನಾಯಕ ಎನ್ನುವುದನ್ನು ನಾವು ಮರೆಯಬಾರದು. ಅವರು ಭಾರತ ಕಂಡ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಧೋನಿ ಸಾಲಿನಲ್ಲಿಯೇ ನಿಲ್ಲುತ್ತಾರೆ" ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇಂದಿನಿಂದ ಭಾರತ vs ಲಂಕಾ ಏಕದಿನ ಸರಣಿ ಆರಂಭ; ಕೊಹ್ಲಿ-ರೋಹಿತ್ ಮೇಲೆ ಕಣ್ಣು
"ನೀವು ಧೋನಿ-ರೋಹಿತ್ ಈ ಇಬ್ಬರಲ್ಲಿ ಯಾರು ಉತ್ತಮ ನಾಯಕ ಎಂದು ಕೇಳಿದರೆ, ವೈಟ್ ಬಾಲ್ ಆಟದ ತಂತ್ರಗಾರಿಕೆಯಲ್ಲಿ ಇಬ್ಬರೂ ಸಮಾನರು ಎಂದು ಹೇಳುತ್ತೇನೆ. ನಾನು ರೋಹಿತ್ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಏನೂ ಹೇಳಲೂ ಸಾಧ್ಯವಿಲ್ಲ. ಯಾಕೆಂದರೆ ಎಂ ಎಸ್ ಧೋನಿ ಭಾರತ ತಂಡಕ್ಕೆ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ" ಎಂದು 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರ ರವಿಶಾಸ್ತ್ರಿ ಹೇಳಿದ್ದಾರೆ.
ರೋಹಿತ್ ಶರ್ಮಾ, 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. 2007ರ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.