ಇಂದಿನಿಂದ ಭಾರತ vs ಲಂಕಾ ಏಕದಿನ ಸರಣಿ ಆರಂಭ; ಕೊಹ್ಲಿ-ರೋಹಿತ್ ಮೇಲೆ ಕಣ್ಣು
ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಆರಂಭವಾಗಲಿದೆ. ಇದೀಗ ಎಲ್ಲರ ಚಿತ್ತ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೊಲಂಬೊ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ, ಶುಕ್ರವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಗೌತಮ್ ಗಂಭೀರ್ ನೇತೃತ್ವದ ಟೀಂ ಮ್ಯಾನೇಜ್‌ಮೆಂಟ್‌ಗೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸವಾಲು ಎದುರಾಗಲಿದ್ದು, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸೂಕ್ತ ಆಟಗಾರರನ್ನು ಗುರುತಿಸುವ ಕೆಲಸವನ್ನು ಗಂಭೀರ್ ಈಗಿನಿಂದಲೇ ಆರಂಭಿಸಲಿದ್ದಾರೆ.
ಸರಣಿಯಿಂದ ವಿಶ್ರಾಂತಿ ಪಡೆಯಲು ಬಯಸಿದ್ದರು ಎನ್ನಲಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಆಯ್ಕೆಗೆ ಲಭ್ಯರಿರುವಂತೆ ಗಂಭೀರ್ ಸೂಚಿಸಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ನಿರೀಕ್ಷೆಯಂತೆ ಇಬ್ಬರೂ ಹಿರಿಯ ಆಟಗಾರರು ತಂಡದಲ್ಲಿದ್ದು, ಎಲ್ಲರ ಕಣ್ಣು ಅವರ ಮೇಲೆ ಇರಲಿದೆ.
ಇನ್ನು ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕೆ ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ನಡುವೆ ಪೈಪೋಟಿ ಏರ್ಪಡಲಿದೆ. ಕಳೆದ ವರ್ಷ ಏಷ್ಯಾಕಪ್‌ನಿಂದ ರಾಹುಲ್ ತಂಡದ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಆದರೆ, ಗಂಭೀರ್ ಸಹ ರಾಹುಲ್‌ರನ್ನೇ ಮುಂದುವರಿಸಲಿದ್ದಾರೆಯೇ ಅಥವಾ ರಿಷಭ್ ಪಂತ್ ಮೇಲೆ ಹೆಚ್ಚು ವಿಶ್ವಾಸ ಇರಿಸಲಿದ್ದಾರೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಬ್ಲಡ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಭಾರತದ ಮಾಜಿ ಕ್ರಿಕೆಟಿಗ ಅನ್ಶುಮನ್ ಗಾಯಕ್ವಾಡ್..!
ಇನ್ನು, ಶ್ರೇಯಸ್ ಅಯ್ಯರ್ ಮೇಲೂ ಎಲ್ಲರ ಕಣ್ಣಿದೆ. ವೈಯಕ್ತಿಕ ಕಾರಣಗಳಿಂದ ಹಾರ್ದಿಕ್ ಪಾಂಡ್ಯ ಸರಣಿಗೆ ಗೈರಾಗಲು ನಿರ್ಧರಿಸಿದ್ದು, ಶಿವಂ ದುಬೆ ಅಥವಾ ರಿಯಾನ್ ಪರಾಗ್‌ಗೆ ಸ್ಥಾನ ಸಿಗಬಹುದು. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಪರಾಗ್ ಬೌಲಿಂಗ್‌ನಲ್ಲೂ ಮಿಂಚಿದ ಕಾರಣ, ಏಕದಿನದಲ್ಲೂ ಅವರನ್ನೇ ಆಡಿಸುವ ಸಾಧ್ಯತೆ ಹೆಚ್ಚು.
ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಕಾರಣ, ಮೊಹಮದ್ ಸಿರಾಜ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಅರ್ಶ್‌ದೀಪ್ ಸಿಂಗ್, ಖಲೀಲ್ ಅಹ್ಮದ್ ಇಬ್ಬರು ಎಡಗೈ ವೇಗಿಗಳಿದ್ದು, ಹರ್ಷಿತ್ ರಾಣಾ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಸ್ಪಿನ್ನರ್‌ಗಳಾಗಿ ಆಡಲಿದ್ದಾರೆ.
ಐಪಿಎಲ್ ಮೆಗಾ ಹರಾಜಿನ ಬಗ್ಗೆ ಶಾರುಖ್ ಖಾನ್-ನೆಸ್ ವಾಡಿಯಾ ಮಾತಿನ ಚಕಮಕಿ..! ಕೆಕೆಆರ್ ಮಾಲೀಕರ ಡಿಮ್ಯಾಂಡ್ ಏನು?
ಇನ್ನು ಲಂಕಾ ತಂಡವನ್ನು ಚರಿತ್ ಅಸಲಂಕ ಮುನ್ನಡೆಸಲಿದ್ದು, ಗಾಯದ ಸಮಸ್ಯೆ ಕಾರಣ ಹಲವು ಆಟಗಾರರು ಹೊರಬಿದ್ದಿದ್ದಾರೆ. ಹೀಗಾಗಿ, ತಂಡ ಸರಣಿ ಆರಂಭಕ್ಕೂ ಮೊದಲೇ ಸಂಕಷ್ಟಕ್ಕೆ ಗುರಿಯಾಗಿದೆ.
ಸಂಭವನೀಯ ಆಟಗಾರರ ಪಟ್ಟಿ:
ಭಾರತ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್/ರಿಷಭ್ ಪಂತ್, ಶಿವಂ ದುಬೆ/ರಿಯಾನ್ ಪರಾಗ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಖಲೀಲ್ ಅಹಮದ್/ಆರ್ಶದೀಪ್ ಸಿಂಗ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಆವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಮಿಕಾ ಕರುಣರತ್ನೆ, ದುನಿತ್ ವೆಲ್ಲಾಲಗೆ, ಮಹೀಶ್ ತೀಕ್ಷಣ, ಆಸಿತಾ ಫರ್ನಾಂಡೋ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್