ರವಿ ಬಿಷ್ಣೋಯ್‌ ಸದ್ಯ 699 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ಅಫ್ಘಾನಿಸ್ತಾನದ ರಶೀದ್‌ ಖಾನ್‌ (692)ಗಿಂತ ಕೇವಲ 7 ಅಂಕಗಳಿಂದ ಮುಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬಿಷ್ಣೋಯ್‌ ಉತ್ತಮ ಪ್ರದರ್ಶನ ತೋರಿದರಷ್ಟೇ ಅಗ್ರಸ್ಥಾನ ಉಳಿಸಿಕೊಳ್ಳಲು ಸಾಧ್ಯ.

ದುಬೈ(ಡಿ.09): ಟಿಂ ಇಂಡಿಯಾದ ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ ಐಸಿಸಿ ಟಿ20 ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ 9 ವಿಕೆಟ್‌ ಕಬಳಿಸಿದ್ದ ಬಿಷ್ಣೋಯ್‌ 4 ಸ್ಥಾನಗಳ ಏರಿಕೆ ಕಂಡು ತಮ್ಮ ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬೌಲರ್ ಮಾತ್ರವಲ್ಲದೇ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡಾ ನಂ.1 ಸ್ಥಾನದಲ್ಲಿದ್ದು, ಚುಟುಕು ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮುಂದುವರೆದಿದೆ. 

ರವಿ ಬಿಷ್ಣೋಯ್‌ ಸದ್ಯ 699 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ಅಫ್ಘಾನಿಸ್ತಾನದ ರಶೀದ್‌ ಖಾನ್‌ (692)ಗಿಂತ ಕೇವಲ 7 ಅಂಕಗಳಿಂದ ಮುಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬಿಷ್ಣೋಯ್‌ ಉತ್ತಮ ಪ್ರದರ್ಶನ ತೋರಿದರಷ್ಟೇ ಅಗ್ರಸ್ಥಾನ ಉಳಿಸಿಕೊಳ್ಳಲು ಸಾಧ್ಯ. 23 ವರ್ಷದ ಬಲಗೈ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯ್ ಕಳೆದ ವರ್ಷದ ಫೆಬ್ರವರಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಬಿಷ್ಣೋಯ್ 21 ಪಂದ್ಯಗಳನ್ನಾಡಿ 34 ಟಿ20 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಕೈಯಿಂದ ಚೆಂಡನ್ನು ಮುಟ್ಟಿ ಔಟಾದ ಮುಷ್ಫಿಕುರ್ ರಹೀಂ! ವಿಡಿಯೋ ವೈರಲ್

ಇನ್ನುಳಿದಂತೆ ಗಾಯದ ಸಮಸ್ಯೆಯಿಂದಾಗಿ ಏಕದಿನ ವಿಶ್ವಕಪ್ ಟೂರ್ನಿಯಿಂದ ವಂಚಿತರಾಗಿದ್ದ ಅಕ್ಷರ್ ಪಟೇಲ್ ಕೂಡಾ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜಿಗಿತ ಕಂಡಿದ್ದು, 11ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆಸೀಸ್ ಎದುರಿನ ಸರಣಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಯಶಸ್ವಿ ಜೈಸ್ವಾಲ್ 16 ಸ್ಥಾನ ಜಿಗಿತ ಕಂಡು 19ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಭಾರತೀಯ ಆಟಗಾರರು

ನವದೆಹಲಿ: ಡಿ.10ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಬುಧವಾರ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದರು. ತಂಡದ ಕೆಲ ಆಟಗಾರರ ಜೊತೆಗೆ ವಿಮಾನದಲ್ಲಿರುವ ಫೋಟೋವನ್ನು ರಿಂಕು ಸಿಂಗ್‌ ಹಾಗೂ ನಾಯಕ ಸೂರ್ಯಕುಮಾರ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನನ್ನಿಂದ ಸಾಧ್ಯವಿಲ್ಲ, ಐಪಿಎಲ್ ತಯಾರಿ ಬೆನ್ನಲ್ಲೇ ಎಂಎಸ್ ಧೋನಿ ವಿಡಿಯೋ ವೈರಲ್!

ಕೆಲ ದಿನಗಳ ಬಳಿಕ ಏಕದಿನ ತಂಡದ ನಾಯಕ ಕೆ.ಎಲ್.ರಾಹುಲ್‌ ಹಾಗೂ ಇತರ ಆಟಗಾರರೂ ಆಫ್ರಿಕಾಕ್ಕೆ ತೆರಳಲಿದ್ದಾರೆ. ಟೆಸ್ಟ್‌ ಸರಣಿ ಮಾತ್ರ ಆಡಲಿರುವ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಸೇರಿದಂತೆ ಹಿರಿಯ ಕೆಲ ಆಟಗಾರರು ಇನ್ನೆರಡು ವಾರಗಳಲ್ಲಿ ತಂಡ ಕೂಡಿಕೊಳ್ಳಲಿದ್ದಾರೆ. 3 ಪಂದ್ಯಗಳ ಏಕದಿನ ಸರಣಿ ಡಿ.17ರಿಂದ, 2 ಪಂದ್ಯ ಟೆಸ್ಟ್‌ ಸರಣಿ ಡಿ.26ರಿಂದ ಶುರುವಾಗಲಿದೆ.