ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಮುಂಬೈ ವಿದರ್ಭ ವಿರುದ್ಧ ಸೋಲಿನತ್ತ ಸಾಗುತ್ತಿದ್ದು, ಡ್ರಾ ಆದರೂ ಹೊರಬೀಳಲಿದೆ. ವಿದರ್ಭ 292 ರನ್ ಗಳಿಸಿ, ಮುಂಬೈಗೆ 406 ರನ್‌ಗಳ ಗುರಿ ನೀಡಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಮುಂಬೈ 83/3 ಗಳಿಸಿದೆ. ಮತ್ತೊಂದು ಪಂದ್ಯದಲ್ಲಿ ಗುಜರಾತ್ ಮತ್ತು ಕೇರಳ ಸೆಣಸಾಡುತ್ತಿವೆ. 

ನಾಗ್ಪುರ: ಹಾಲಿ ಚಾಂಪಿಯನ್ ಮುಂಬೈ ತಂಡ ಈ ಬಾರಿ ರಣಜಿ ಟ್ರೋಫಿ ಫೈನಲ್‌ಗೇರುವ ಸಾಧ್ಯತೆ ಕ್ಷೀಣಿಸಿದೆ. ವಿದರ್ಭ ವಿರುದ್ಧ ಸೆಮಿಫೈನಲ್‌ನಲ್ಲಿ ತಂಡ ಸೋಲಿನ ಭೀತಿಗೆ ಸಿಲುಕಿದೆ. ಒಂದು ವೇಳೆ ಮುಂಬೈ ತಂಡ ಪಂದ್ಯವನ್ನು ಡ್ರಾ ಮಾಡಿಕೊಂಡರೂ ರಣಜಿ ಟ್ರೋಫಿ ಟೂರ್ನಿಯಿಂದ ಹೊರಬೀಳಲಿದೆ.

ವಿದರ್ಭ 2ನೇ ಇನ್ನಿಂಗ್ಸ್‌ನಲ್ಲಿ ಗುರುವಾರ 292ಕ್ಕೆ ಆಲೌಟಾಯಿತು. ಯಶ್ ರಾಥೋಡ್ 151 ರನ್ ಸಿಡಿಸಿದರೆ, ಅಕ್ಷಯ್ ವಾಡ್ಕರ್ 52 ರನ್ ಕೊಡುಗೆ ನೀಡಿದರು. ಶಮ್ಸ್ ಮುಲಾನಿ 6, ತನುಶ್ ಕೋಟ್ಯನ್ 3 ವಿಕೆಟ್ ಕಿತ್ತರು.

ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್ ಹಿನ್ನಡೆ ಅನುಭವಿಸಿದ್ದ ಮುಂಬೈ, ಗೆಲುವಿಗೆ ಒಟ್ಟಾರೆ 406 ರನ್ ಗುರಿ ಪಡೆಯಿತು. ಆದರೆ ಮತ್ತೆ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಗಿರುವ ತಂಡ 4ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 83 ರನ್ ಗಳಿಸಿದ್ದು, ಕೊನೆ ದಿನವಾದ ಶುಕ್ರವಾರ ಇನ್ನೂ 323 ರನ್ ಗಳಿಸಬೇಕಿದೆ. ಒಂದು ವೇಳೆ ಪಂದ್ಯ ಡ್ರಾ ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ವಿದರ್ಭ ಫೈನಲ್‌ಗೇರಲಿದೆ.

ಟೀಂ ಇಂಡಿಯಾ ಬೌಲರ್‌ಗೆ ಕೈಮುಗಿದು ಕ್ಷಮೆ ಕೇಳಿದ ಕ್ಯಾಪ್ಟನ್ ರೋಹಿತ್ ಶರ್ಮಾ! ವಿಡಿಯೋ ವೈರಲ್

05 ಶತಕ: ವಿದರ್ಭದ ಯಶ್ ರಾಥೋಡ್ ರಣಜಿ ಕ್ರಿಕೆಟ್‌ನಲ್ಲಿ 5ನೇ ಶತಕ ಪೂರ್ಣಗೊಳಿಸಿದರು. ಅವರಿಗಿದು ಸತತ 2ನೇ ಶತಕ.

ಕೇರಳ ಗುಜರಾತ್ ಜಿದ್ದಾಜಿದ್ದಿನ ಹೋರಾಟ

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಗುಜರಾತ್ ಹಾಗೂ ಕೇರಳ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಗುಜರಾತ್ 4ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 429 ರನ್ ಗಳಿಸಿದ್ದು, ಇನ್ನು 28 ರನ್ ಹಿನ್ನಡೆಯಲ್ಲಿದೆ. ಪ್ರಿಯಾಂಕ್ ಪಾಂಚಾಲ್ 148, ಜಯ್‌ಮೀತ್ ಪಟೇಲ್ ಔಟಾಗದೆ 14 ರನ್ ಗಳಿಸಿದ್ದಾರೆ. ಪಂದ್ಯ ಡ್ರಾಗೊಳ್ಳುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಮೊದಲ ಇನ್ನಿಂಗ್ಸ್‌ ಲೀಡ್ ಪಡೆದ ತಂಡ ಫೈನಲ್‌ಗೇರಲಿದೆ.

ಸ್ಪೋಟಕ ಬ್ಯಾಟಿಂಗ್ ಮೂಲಕ ದಿಗ್ಗರ ದಾಖಲೆ ಅಳಿಸಿಹಾಕಿದ ರೋಹಿತ್ ಶರ್ಮಾ!

ನನಗಿನ್ನು ಮಗುವಿನಂತೆ ಕ್ರಿಕೆಟ್‌ನ ಆನಂದಿಸಬೇಕು: ಮಾಜಿ ನಾಯಕ ಧೋನಿ

ಮುಂಬೈ: ನನ್ನ ಕ್ರಿಕೆಟ್ ವೃತ್ತಿ ಜೀವನದ ಉಳಿದ ಸಮಯವನ್ನು ಮಗುವಿನಂತೆ ಆನಂದಿಸಲು ಬಯಸುತ್ತೇನೆ ಎಂದು ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಹೇಳಿದ್ದಾರೆ. ಬುಧವಾರ ತಮ್ಮದೇ ಆ್ಯಪ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ‘2019ರಲ್ಲೇ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದೇನೆ. ಇನ್ನು ಕೆಲವು ಸಮಯ ಮಾತ್ರ ಆಡಲು ಸಾಧ್ಯವಿದೆ. ಅದನ್ನು ನಾನು ಮಗುವಿನಂತೆ ಆನಂದಿಸಬೇಕು. ಶಾಲೆಯಲ್ಲಿದ್ದಾಗ ಕ್ರಿಕೆಟ್‌ನ ಎಂಜಾಯ್‌ ಮಾಡುತ್ತಿದ್ದ ರೀತಿಯಲ್ಲೇ ಮತ್ತೆ ಆಡಬೇಕಾಗಿದೆ’ ಎಂದಿದ್ದಾರೆ. ಧೋನಿ ಈ ಬಾರಿಯೂ ಐಪಿಎಲ್‌ನಲ್ಲಿ ಚೆನ್ನೈ ಪರ ಆಡಲಿದ್ದಾರೆ.