* ರೋಚಕಘಟ್ಟದತ್ತ ಕರ್ನಾಟಕ-ಉತ್ತರಪ್ರದೇಶ ಕ್ವಾರ್ಟರ್‌ ಫೈನಲ್ ಪಂದ್ಯ* ಎರಡನೇ ದಿನದಾಟದಲ್ಲಿ ಬರೋಬ್ಬರಿ 21 ವಿಕೆಟ್‌ಗಳು ಪತನ* ಎರಡನೇ ದಿನದಾಟದಂತ್ಯಕ್ಕೆ 198 ರನ್‌ ಮುನ್ನಡೆ ಸಾಧಿಸಿದ ಕರ್ನಾಟಕ

ಬೆಂಗಳೂರು(ಜೂ.07): ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದ ಎರಡನೇ ದಿನದಾಟದಲ್ಲಿ ಬೌಲರ್‌ಗಳು ಅಕ್ಷರಶಃ ಮೆರೆದಾಡಿದ್ದಾರೆ. ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ಎರಡನೇ ದಿನದಾಟದಲ್ಲಿ ಬರೋಬ್ಬರಿ 21 ವಿಕೆಟ್‌ಗಳು ಪತನವಾಗಿವೆ. ಎರಡನೇ ದಿನದಾಟದಂತ್ಯದ ವೇಳೆಗೆ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಬಾರಿಸಿದ್ದು, ಒಟ್ಟಾರೆ 198 ರನ್‌ಗಳ ಮುನ್ನಡೆ ಸಾಧಿಸಿದೆ. 

ಮೊದಲ ಇನಿಂಗ್ಸ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು 155 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 98 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಮಯಾಂಕ್ ಅಗರ್‌ವಾಲ್ ಹಾಗೂ ರವಿಕುಮಾರ್ ಸಮರ್ಥ್ 33 ರನ್‌ಗಳ ಜತೆಯಾಟ ನಿಭಾಯಿಸಿದರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಕರ್ನಾಟಕ ತಂಡವು ನಾಟಕೀಯ ಕುಸಿತ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ರವಿಕುಮಾರ್ ಸಮರ್ಥ್ 11 ರನ್ ಬಾರಿಸಿ ಪ್ರಿನ್ಸ್ ಯಾದವ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ ಕೇವಲ 22 ರನ್‌ಗಳಿಗೆ ಸೀಮಿತವಾಯಿತು.

77 ರನ್‌ಗಳ ಅಂತರದಲ್ಲಿ 8 ವಿಕೆಟ್ ಪತನ: ಕರ್ನಾಟಕ ತಂಡವು 33 ರನ್‌ಗಳ ವರೆಗೂ ಒಂದೇ ಒಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಆದರೆ ಸಮರ್ಥ್ ವಿಕೆಟ್ ಪತನದ ಬಳಿಕ ಕರ್ನಾಟಕ ತಂಡವು ನಿರಂತರ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕರುಣ್ ನಾಯರ್(10), ಕೃಷ್ಣಮೂರ್ತಿ ಸಿದ್ದಾರ್ಥ್‌(15) ನಾಯಕ ಮನೀಶ್ ಪಾಂಡೆ(4), ಶ್ರೇಯಸ್ ಗೋಪಾಲ್(3). ಕೃಷ್ಣಪ್ಪ ಗೌತಮ್(1) ಹಾಗೂ ವಿಜಯ್‌ಕುಮಾರ್ ವೈಶಾಕ್(5) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ. 

ಇದಕ್ಕೂ ಮೊದಲು ಮೊದಲ ದಿನದಾಟದಂತ್ಯದ ವೇಳೆಗೆ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿದ್ದ ಕರ್ನಾಟಕ ಕ್ರಿಕೆಟ್ ತಂಡವು, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಬಾರಿಸಿದ ಅಜೇಯ ಅರ್ಧಶತಕ(56*)ದ ನೆರವಿನಿಂದ 253 ರನ್ ಬಾರಿಸಿ ಸರ್ವಪತನ ಕಂಡಿತು. ಉತ್ತರ ಪ್ರದೇಶ ಪರ ಸೌರಭ್ ಕುಮಾರ್ 4 ವಿಕೆಟ್ ಪಡೆದರೆ, ಶಿವಂ ಮಾವಿ 3, ಯಶ್ ದಯಾಳ್ 2 ಹಾಗೂ ಅಂಕಿತ್ ರಜಪೂತ್ 1 ವಿಕೆಟ್ ಪಡೆದರು. 

ಇನ್ನು ಕರ್ನಾಟಕ ತಂಡವನ್ನು ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ಉತ್ತರ ಪ್ರದೇಶ ತಂಡಕ್ಕೆ ಕರ್ನಾಟಕದ ವೇಗಿಗಳು ಶಾಕ್ ನೀಡಿದರು. ಉತ್ತರ ಪ್ರದೇಶದ ಆರಂಭಿಕ ಬ್ಯಾಟರ್‌ಗಳು 10 ರನ್‌ಗಳಿಸುವಷ್ಟರಲ್ಲಿ ಇಬ್ಬರು ಪೆವಿಲಿಯನ್ ಸೇರಿದರು. ಇನ್ನು ನಾಯಕ ಕರಣ್ ಶರ್ಮಾ ಬ್ಯಾಟಿಂಗ್ ಕೇವಲ 2 ರನ್‌ಗಳಿಗೆ ಸೀಮಿತವಾಯಿತು. 4ನೇ ವಿಕೆಟ್‌ಗೆ ಪ್ರಿಯಂ ಗರ್ಗ್ ಹಾಗೂ ರಿಂಕು ಸಿಂಗ್ ಜೋಡಿ 42 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರೆ ಈ ಜೋಡಿ ಬೇರ್ಪಡಿಸುವಲ್ಲಿ ರೋನಿತ್ ಮೋರೆ ಯಶಸ್ವಿಯಾದರು.

ಉತ್ತರ ಪ್ರದೇಶ ನಾಟಕೀಯ ಕುಸಿತ: ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಉತ್ತರ ಪ್ರದೇಶ ತಂಡಕ್ಕೆ ಪ್ರಿಯಂ ಗರ್ಗ್ ಹಾಗೂ ರಿಂಕು ಸಿಂಗ್ ಕೆಲಕಾಲ ಆಸರೆಯಾಗುವ ಯತ್ನ ನಡೆಸಿದರು. ಗರ್ಗ್‌ 39 ರನ್ ಬಾರಿಸಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರೆ, ರಿಂಕು ಸಿಂಗ್ 33 ರನ್‌ ಗಳಿಸಿ ಕೃಷ್ಣಪ್ಪ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ದೃವ್ ಜ್ವರೆಲ್(9) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಪ್ರಿನ್ಸ್ ಯಾದವ್ ಹಾಗೂ ಸೌರಭ್ ಕುಮಾರ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಇನ್ನು ಕೊನೆಯಲ್ಲಿ ಶಿವಂ ಮಾವಿ(32), ಯಶ್ ದಯಾಳ್(13) ಹಾಗೂ ಅಂಕಿತ್ ರಜಪೂತ್(18) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.