* ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಮಾರಕ ದಾಳಿ* ಜಮ್ಮು-ಕಾಶ್ಮೀರ ಎದುರು 6 ವಿಕೆಟ್ ಕಬಳಿಸಿ ಮಿಂಚಿದ ಪ್ರಸಿದ್ಧ್* ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿ, ಗೆಲುವಿನತ್ತ ರಾಜ್ಯ ತಂಡ ದಾಪುಗಾಲು 

ಚೆನ್ನೈ(ಫೆ.26): 2022ರ ರಣಜಿ ಟ್ರೋಫಿಯಲ್ಲಿ (Ranji Trophy) ಮೊದಲ ಗೆಲುವಿನತ್ತ ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡ (Karnataka Cricket Tem) ಹೆಜ್ಜೆ ಹಾಕಿದೆ. ಜಮ್ಮು-ಕಾಶ್ಮೀರ ವಿರುದ್ಧದ ‘ಎಲೈಟ್‌’ ಸಿ ಗುಂಪಿನ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿರುವ ಕರ್ನಾಟಕ ತಂಡವು, 2ನೇ ಇನ್ನಿಂಗ್ಸ್‌ನಲ್ಲೂ ದೊಡ್ಡ ಮೊತ್ತ ಗಳಿಸಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಕರ್ನಾಟಕ ತಂಡದ ಪರ ಬ್ಯಾಟಿಂಗ್‌ನಲ್ಲಿ ಕರುಣ್ ನಾಯರ್ ಮಿಂಚಿದರೆ, ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ ಮೊನಚಾದ ದಾಳಿ ನಡೆಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 268 ರನ್‌ ಗಳಿಸಿದ್ದ ಕರ್ನಾಟಕ, 2ನೆ ದಿನವಾದ ಶುಕ್ರವಾರ 302 ರನ್‌ಗೆ ಆಲೌಟ್‌ ಆಯಿತು. ಕರುಣ್‌ ನಾಯರ್‌ (Karun Nair) 175 ರನ್‌ ಗಳಿಸಿದರು. ಮೊದಲ ದಿನದಾಟದಂತ್ಯಕ್ಕೆ ಅಜೇಯ 152 ರನ್ ಗಳಿಸಿದ್ದ ಕರುಣ್ ನಾಯರ್ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ 23 ರನ್‌ಗಳನ್ನು ಸೇರಿಸಿದರೆ, ಯುವ ಕ್ರಿಕೆಟಿಗ ವಿದ್ಯಾಧರ್ ಪಾಟೀಲ್ 11 ರನ್‌ಗಳಿಸುವ ಮೂಲಕ ತಂಡ ಮುನ್ನೂರರ ಗಡಿ ದಾಟುವಂತೆ ಮಾಡಿದರು.

ಮೊದಲ ಇನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಪರ್ವೇಜ್ ರಸೂಲ್ 4 ವಿಕೆಟ್ ಪಡೆದರೆ, ಮುಜ್ತಬಾ ಯೂಸುಫ್, ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರೆ, ಆಕೀಬ್ ನಬಿ ಹಾಗೂ ಅಬ್ದುಲ್ ಸಮದ್ ತಲಾ ಒಂದೊಂದು ವಿಕೆಟ್ ಪಡೆದರು.

Ranji Trophy: ದಿಢೀರ್ ಕುಸಿದ ಕರ್ನಾಟಕಕ್ಕೆ ಕರುಣ್‌ ನಾಯರ್ ಆಸರೆ

ಇದಾದ ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಜಮ್ಮು-ಕಾಶ್ಮೀರ ಕೇವಲ 93 ರನ್‌ಗೆ ಆಲೌಟ್‌ ಆಯಿತು. ಭಾರತ ತಂಡದಲ್ಲಿ ಮಿಂಚಿದ್ದ ಪ್ರಸಿದ್ಧ್ ಕೃಷ್ಣ, ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದು 12 ಓವರಲ್ಲಿ ಕೇವಲ 35 ರನ್‌ಗೆ 6 ವಿಕೆಟ್‌ ಉರುಳಿಸಿದರು. ಆರಂಭಿಕರಾದ ಕಮ್ರಾನ್‌ ಇಕ್ಬಾಲ್‌ 35, ಜತಿನ್‌ ವಾಧ್ವಾನ್‌ 25 ರನ್‌ ಗಳಿಸಿದ್ದನ್ನು ಹೊರತುಪಡಿಸಿ ಉಳಿದ್ಯಾವ ಆಟಗಾರರು ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಪ್ರಸಿದ್ಧ್ ಕೃಷ್ಣಗೆ ಉತ್ತಮ ಸಾಥ್ ನೀಡಿದ ವಿದ್ಯಾಧರ್ ಪಾಟೀಲ್ 2 ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಜಮ್ಮು ಮತ್ತು ಕಾಶ್ಮೀರ ಎದುರು ಫಾಲೋ ಆನ್ ಹೇರುವ ಅವಕಾಶವಿದ್ದರೂ ಸಹಾ ಮನೀಶ್ ಪಡೆ ಫಾಲೋ ಆನ್‌ ಹೇರದೆ ಬ್ಯಾಟಿಂಗ್ ಮಾಡಲು ತೀರ್ಮಾನಿಸಿತು. ಕರ್ನಾಟಕ, 2ನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 106 ರನ್‌ ಜೊತೆಯಾಟ ಪಡೆಯಿತು. ದೇವದತ್ ಪಡಿಕ್ಕಲ್‌ 49, ಸಮರ್ಥ್ 62 ರನ್‌ ಗಳಿಸಿ ಔಟಾದರು. ಕರ್ನಾಟಕ 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿದ್ದು, ಒಟ್ಟಾರೆ 337 ರನ್‌ ಮುನ್ನಡೆ ಪಡೆದಿದೆ. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಕರುಣ್ ನಾಯರ್(10) ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್(1) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದಲ್ಲಿ ಬೃಹತ್ ಮೊತ್ತ ಗಳಿಸಿ ಕರ್ನಾಟಕ ತಂಡವು ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಳ್ಳುವ ಸಾಧ್ಯತೆಯಿದೆ. 

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 302/10(ಮೊದಲ ಇನಿಂಗ್ಸ್‌)
ಕರುಣ್ ನಾಯರ್: 175
ಪರ್ವೇಜ್ ರಸೂಲ್: 60/4

ಜಮ್ಮು ಮತ್ತು ಕಾಶ್ಮೀರ: 93/10
ಕಮ್ರಾನ್‌ ಇಕ್ಬಾಲ್‌: 35
ಪ್ರಸಿದ್ಧ್ ಕೃಷ್ಣ: 35/6

ಕರ್ನಾಟಕ: 128/2(ಎರಡನೇ ಇನಿಂಗ್ಸ್‌)
ರವಿಕುಮಾರ್ ಸಮರ್ಥ್: 62
ಆಬಿದ್ ಮುಷ್ತಾಕ್‌: 24/2

(* ಎರಡನೇ ದಿನದಾಟದಂತ್ಯದ ವೇಳೆಗೆ)