Ranji Trophy: ದಿಢೀರ್ ಕುಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಆಸರೆ
* ಆಕರ್ಷಕ ಶತಕದ ಮೂಲಕ ತಂಡಕ್ಕೆ ಆಸರೆಯಾದ ಕರುಣ್ ನಾಯರ್
* ರಣಜಿ ಟ್ರೋಫಿಯ ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ 268/8
* ಅಜೇಯ 152 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡ ಕರುಣ್ ನಾಯರ್
ಬೆಂಗಳೂರು(ಫೆ.24): ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ (Ranji Trophy) ಪಂದ್ಯದಲ್ಲಿ ಕರುಣ್ ನಾಯರ್ (Karun Nair) ಬಾರಿಸಿದ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು ಸವಾಲಿನ ಮೊತ್ತ ಕಲೆಹಾಕುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತದ ಹೊರತಾಗಿಯೂ ಕರ್ನಾಟಕ ತಂಡವು ಮೊದಲ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 268 ರನ್ ಬಾರಿಸಿದೆ. ಮಾಜಿ ನಾಯಕ ಕರುಣ್ ನಾಯರ್ 152 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಡ್ರಾನೊಂದಿಗೆ 2022ರ ರಣಜಿ ಟ್ರೋಫಿಯನ್ನು ಆರಂಭಿಸಿದ 8 ಬಾರಿ ಚಾಂಪಿಯನ್ ಕರ್ನಾಟಕ, ಎಲೈಟ್ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ ಹಂತಕ್ಕೇರುವ ಲೆಕ್ಕಾಚಾರದಲ್ಲಿದೆ. ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಕರ್ನಾಟಕ ತಂಡವು (Karnataka Cricket Team) ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಕೇವಲ 8 ರನ್ ಬಾರಿಸಿ ಮುಜ್ತಬಾ ಯೂಸುಫ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಉಪನಾಯಕ ರವಿಕುಮಾರ್ ಸಮರ್ಥ್ ಹಾಗೂ ಕರುಣ್ ನಾಯರ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 98 ರನ್‌ಗಳ ಜತೆಯಾಟ ನಿಭಾಯಿಸಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸಮರ್ಥ್ 74 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 45 ರನ್ ಬಾರಿಸಿ ಅಬ್ದುಲ್ ಸಮದ್‌ಗೆ ವಿಕೆಟ್ ಒಪ್ಪಿಸಿದರು.
ಕರುಣ್ ನಾಯರ್ ಕೆಚ್ಚೆದೆಯ ಶತಕ: ಕರ್ನಾಟಕ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದಾಗ ಕ್ರೀಸ್‌ಗಿಳಿದ ಅನುಭವಿ ಬ್ಯಾಟರ್ ಕರುಣ್ ನಾಯರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಒಟ್ಟು 172 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ವೃತ್ತಿಜೀವನದ 11ನೇ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ಬರೋಬ್ಬರಿ 14 ಪಂದ್ಯಗಳ ಬಳಿಕ ಕರುಣ್ ನಾಯರ್ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. ಈ ಮೊದಲು 2017-18ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ವಿದರ್ಭ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ಶತಕ ಬಾರಿಸಿದ್ದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರಿರುವ ಕರುಣ್ ಒಟ್ಟು 267 ಎಸೆತಗಳನ್ನು ಎದುರಿಸಿ 21 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 152 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Ranji Trophy ಜಮ್ಮು ಕಾಶ್ಮೀರ ಎದುರು ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ
ದಿಢೀರ್ ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 163 ರನ್‌ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಕರ್ನಾಟಕ ತಂಡಕ್ಕೆ ಯುವ ಮಾರಕ ವೇಗಿ ಉಮ್ರಾನ್ ಮಲಿಕ್ ಆಘಾತ ನೀಡಿದರು. ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ್ದ ಮನೀಶ್ ಪಾಂಡೆ (Manish Pandey) ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್ ಅವರನ್ನು ಅಲ್ಪ ಮೊತ್ತಕ್ಕೆ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಸಿದ್ದಾರ್ಥ್ 16 ರನ್ ಗಳಿಸಿದರೆ, ಮನೀಶ್ ಪಾಂಡೆ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಶರತ್ 11 ರನ್ ಗಳಿಸಿದರೆ, ಆಲ್ರೌಂಡರ್‌ಗಳಾದ ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್ ಕೂಡಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ಕರ್ನಾಟಕ ತಂಡವು 209 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 8ನೇ ವಿಕೆಟ್‌ಗೆ ರೋನಿತ್ ಮೋರೆ ಹಾಗೂ ಕರುಣ್ ನಾಯರ್ ಜೋಡಿ 57 ರನ್‌ಗಳ ಜತೆಯಾಟವಾಡುವ ಮೂಲಕ ತಂಡ 250 ರನ್‌ಗಳ ಗಡಿದಾಟಿಸಿದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ: 268/8
ಕರುಣ್ ನಾಯರ್: 152*
ಉಮ್ರಾನ್ ಮಲಿಕ್: 35/2
(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)