ರಣಜಿ ಟ್ರೋಫಿಯಲ್ಲಿ ಮುಂಬೈ, ಗುಜರಾತ್, ವಿದರ್ಭ ಸೆಮಿಫೈನಲ್ ತಲುಪಿವೆ. ಜಮ್ಮು ಮತ್ತು ಕಾಶ್ಮೀರ ಕೂಡ ಸೆಮಿಗೆ ಹತ್ತಿರದಲ್ಲಿದೆ. ಮುಂಬೈ 152 ರನ್‌ಗಳಿಂದ, ವಿದರ್ಭ 198 ರನ್‌ಗಳಿಂದ ಹಾಗೂ ಗುಜರಾತ್ ಇನ್ನಿಂಗ್ಸ್ ಮತ್ತು 98 ರನ್‌ಗಳಿಂದ ಜಯ ಸಾಧಿಸಿವೆ. ಸಂಜು ಸ್ಯಾಮ್ಸನ್ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರು ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ.
ಕೋಲ್ಕತಾ: ಹಾಲಿ ಚಾಂಪಿಯನ್ ಮುಂಬೈ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಗುಜರಾತ್, ವಿದರ್ಭ ಕೂಡಾ ಅಂತಿಮ 4ರ ಘಟ್ಟಕ್ಕೇರಿದೆ. ಜಮ್ಮು ಮತ್ತು ಕಾಶ್ಮೀರ ಸೆಮಿಫೈನಲ್ ಸನಿಹದಲ್ಲಿದೆ.
ಹರ್ಯಾಣ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ152 ರನ್ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 315, ಹರ್ಯಾಣ 301 ರನ್ ಗಳಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯಾ ರಹಾನೆ(108) ಅಬ್ಬರದ ನೆರವಿನಿಂದ 339 ರನ್ ಕಲೆಹಾಕಿದ ಮುಂಬೈ, 354 ರನ್ ಗುರಿ ನೀಡಿತು. ಆದರೆ ಹರ್ಯಾಣ 201 ರನ್‌ಗೆ ಆಲೌಟಾಯಿತು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡೋರ್ಯಾರು? ಅಚ್ಚರಿ ಭವಿಷ್ಯ ನುಡಿದ ರವಿಶಾಸ್ತ್ರಿ, ರಿಕಿ ಪಾಂಟಿಂಗ್!
ವಿದರ್ಭಕ್ಕೆ 198 ರನ್ ಜಯ
ತಮಿಳುನಾಡು ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ 198 ರನ್ ಗೆಲುವು ಸಾಧಿಸಿತು. ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್ ಕಲೆಹಾಕಿದ್ದರೆ, ತಮಿಳುನಾಡಿಗೆ 225ಕ್ಕೆ ಆಲೌಟಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 272 ರನ್ ಗಳಿಸಿದ ವಿದರ್ಭ ತಂಡ ತಮಿಳುನಾಡಿಗೆ 401 ರನ್ ಗುರಿ ನೀಡಿತು. ಆದರೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾದ ತಮಿಳುನಾಡು 202 ರನ್‌ಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನ ಶತಕವೀರ, ವಿದರ್ಭದ ಕರುಣ್ ನಾಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಗುಜರಾತ್‌ಗೆ ಮಣಿದ ಸೌರಾಷ್ಟ್ರ
ಸೌರಾಷ್ಟ್ರ ವಿರುದ್ಧ ಕ್ವಾರ್ಟರ್‌ನಲ್ಲಿ ಗುಜರಾತ್ ಇನ್ನಿಂಗ್ಸ್ ಹಾಗೂ 98 ರನ್ ಗೆಲುವು ಸಾಧಿಸಿತು. ಸೌರಾಷ್ಟ್ರದ 216 ರನ್‌ಗೆ ಉತ್ತರವಾಗಿ ಗುಜರಾತ್ 511 ರನ್ ಕಲೆಹಾಕಿತ್ತು. 2ನೇ ಇನ್ನಿಂಗ್ಸ್‌ನಲ್ಲೂ ವೈಫಲ್ಯ ಕಂಡ ಸೌರಾಷ್ಟ್ರ 197ಕ್ಕೆ ಆಲೌಟಾಯಿತು.
ರಣಜಿ ಟ್ರೋಫಿ: ಶಾರ್ದೂಲ್ ಠಾಕೂರ್ ಮಿಂಚಿನ ಬೌಲಿಂಗ್, ಮುಂಬೈಗೆ ಇನ್ನಿಂಗ್ಸ್ ಮುನ್ನಡೆ
ಸೆಮೀಸ್‌ಗೇರುತ್ತಾ ಜಮ್ಮು-ಕಾಶ್ಮೀರ?
ಕೇರಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು 280, ಕೇರಳ 281 ರನ್ ಗಳಿಸಿ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಜಮ್ಮು 9 ವಿಕೆಟ್‌ಗೆ 399 ರನ್ ಕಲೆಹಾಕಿತು. ಪರಾಸ್ ಡೋಗ್ರಾ 132 ರನ್ ಗಳಿಸಿದರು. 399 ರನ್ ಗುರಿ ಪಡೆದಿರುವ ಕೇರಳ 4ನೇ ದಿನದದಂತ್ಯಕ್ಕೆ 2 ವಿಕೆಟ್‌ಗೆ 100 ರನ್ ಗಳಿಸಿದ್ದು, ಇನ್ನೂ 299 ರನ್ ಬೇಕಿದೆ.
ಸಂಜು ಬೆರಳಿಗೆ ಸರ್ಜರಿ: ಆರು ವಾರ ವಿಶ್ರಾಂತಿ
ತಿರುವನಂತಪುರಂ: ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದ ಸಂಜು ಸ್ಯಾಮ್ಸನ್ ಕೈ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಚೆಂಡು ಎದುರಿಸುವಾಗ ಸಂಜು ಗಾಯಗೊಂಡಿದ್ದರು. ಸದ್ಯ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದುಬಂದಿದೆ. ಕೈಗೆ ಬ್ಯಾಂಡೇಜ್ ಸುತ್ತಿರುವ ಸಂಜು ವೈದ್ಯರ ಜೊತೆಗಿರುವ ಫೋಟೋ ವೈರಲ್ ಆಗಿದೆ.
