ಬೆಂಗಳೂರು(ಡಿ.26): ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶನ ನಡುವಿನ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದರು. ಮೊದಲ ದಿನ ಒಟ್ಟು 13 ವಿಕೆಟ್‌ಗಳು ಪತನಗೊಂಡವು. ನಂಬಿಕಸ್ಥ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡ ಕಾರಣ, ಕರ್ನಾಟಕ ಕೇವಲ 166 ರನ್‌ಗಳಿಗೆ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಹಿಮಾಚಲ ಪ್ರದೇಶ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 29 ರನ್‌ ಗಳಿಸಿದ್ದು, ಇನ್ನು 137 ರನ್‌ ಹಿನ್ನಡೆಯಲ್ಲಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆತಿಥೇಯ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿ, ಆತ್ಮವಿಶ್ವಾಸದೊಂದಿಗೆ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ಗಿಳಿದ ಹಿಮಾಚಲ ಪ್ರದೇಶಕ್ಕೆ ವಿ.ಕೌಶಿಕ್‌ ಆರಂಭಿಕ ಆಘಾತ ನೀಡಿದರು. ಪ್ರಶಾಂತ್‌ ಚೋಪ್ರಾ ಕೇವಲ 5 ರನ್‌ ಗಳಿಸಿ ಔಟಾದರು. ಗಾಯಾಳು ರೋನಿತ್‌ ಮೋರೆ ಬದಲು ತಂಡ ಕೂಡಿಕೊಂಡ ಎಡಗೈ ವೇಗಿ ಪ್ರತೀಕ್‌ ಜೈನ್‌, ಒಂದೇ ಓವರಲ್ಲಿ 2 ವಿಕೆಟ್‌ ಕಬಳಿಸಿ, ಕರ್ನಾಟಕ ಮೇಲುಗೈ ಸಾಧಿಸಲು ನೆರವಾದರು. ಸುಮಿತ್‌ ವರ್ಮಾ (07) ಹಾಗೂ ನಾಯಕ ಅಂಕಿತ್‌ ಕಲ್ಸಿ (00) ಔಟಾಗಿ ಪೆವಿಲಿಯನ್‌ ಸೇರಿದರು.

ರಣಜಿ ಟ್ರೋಫಿ: ಟಾಸ್ ಗೆದ್ದ ಕರ್ನಾಟಕಕ್ಕೆ ಆರಂಭಿಕ ಆಘಾತ

ಆರಂಭಿಕ ಬ್ಯಾಟ್ಸ್‌ಮನ್‌ ಪ್ರಿಯಾಂಶು ಖಂಡುರಿ (14) ಹಾಗೂ ಆಲ್ರೌಂಡರ್‌ ಮಯಾಂಕ್‌ ಡಾಗರ್‌ (01) 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 2ನೇ ದಿನವಾದ ಗುರುವಾರದ ಮೊದಲ ಅವಧಿ ಎರಡೂ ತಂಡಗಳಿಗೆ ಬಹಳ ಮಹತ್ವದೆನಿಸಿದ್ದು, ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ರಣಜಿ ಪಂದ್ಯಕ್ಕೆ ಗ್ರಹಣ: ತಡವಾಗಿ ಆರಂಭವಾಗಲಿದೆ ಕರ್ನಾಟಕ-ಹಿಮಾಚಲ ಮ್ಯಾಚ್

30ಕ್ಕೆ 4 ವಿಕೆಟ್‌: ಕರ್ನಾಟಕ ತಂಡ ಯಾರ ಮೇಲೆ ಹೆಚ್ಚು ನಿರೀಕ್ಷೆ ಇರಿಸಿತ್ತೋ, ಆ ಇಬ್ಬರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ವಿಕೆಟ್‌ ಕಳೆದುಕೊಂಡರು. ಪಂದ್ಯದ ಮೊದಲ ಎಸೆತದಲ್ಲೇ ಮಯಾಂಕ್‌ ಅಗರ್‌ವಾಲ್‌ ಔಟಾದರೆ, 3ನೇ ಓವರಲ್ಲಿ ದೇವದತ್‌ ಪಡಿಕ್ಕಲ್‌ ಪೆವಿಲಿಯನ್‌ ಸೇರಿದರು. ಲಯದ ಸಮಸ್ಯೆ ಎದುರಿಸುತ್ತಿರುವ ಆರ್‌.ಸಮರ್ಥ್ (04) ಹಾಗೂ ಡಿ.ನಿಶ್ಚಲ್‌ (16) ಸಹ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕರ್ನಾಟಕ 30 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತು.

5ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ನಾಯಕ ಕರುಣ್‌ ನಾಯರ್‌ ಹಾಗೂ ಉಪನಾಯಕ ಶ್ರೇಯಸ್‌ ಗೋಪಾಲ್‌ (27), 56 ರನ್‌ ಜೊತೆಯಾಟವಾಡಿದರು. ಬಿ.ಆರ್‌.ಶರತ್‌(02) ಹಾಗೂ ಜೆ.ಸುಚಿತ್‌ (10)ರಿಂದ ನಿರೀಕ್ಷಿತ ರನ್‌ ಕೊಡುಗೆ ದೊರೆಯಲಿಲ್ಲ. ಅಭಿಮನ್ಯು ಮಿಥುನ್‌ 21 ರನ್‌ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು.

185 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 81 ರನ್‌ ಗಳಿಸಿದ ಕರುಣ್‌, ಶತಕದ ಬಾರಿಸುವ ಅವಕಾಶ ಕೈಚೆಲ್ಲಿದರು. 67.2 ಓವರ್‌ ಬ್ಯಾಟ್‌ ಮಾಡಿ ಕರ್ನಾಟಕ ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು. ಹಿಮಾಚಲ ಪರ ಅಭಿನಯ್‌ ಕನ್ವರ್‌ 5 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಸ್ಕೋರ್‌:

ಕರ್ನಾಟಕ 166/10 (ಕರುಣ್‌ 81, ಶ್ರೇಯಸ್‌ 27, ಅಭಿನಯ್‌ 5/37, ರಿಶಿ ಧವನ್‌ 3/27)

ಹಿಮಾಚಲ ಪ್ರದೇಶ (ಮೊದಲ ದಿನದಂತ್ಯಕ್ಕೆ) 29/3(ಪ್ರಿಯಾಂಶು 14*, ಪ್ರತೀಕ್‌ 2-11, ಕೌಶಿಕ್‌ 1-10)