ರಣಜಿ ಟ್ರೋಫಿ: ಟಾಸ್ ಗೆದ್ದ ಕರ್ನಾಟಕಕ್ಕೆ ಆರಂಭಿಕ ಆಘಾತ
ಹಿಮಾಚಲ ಪ್ರದೇಶ ವಿರುದ್ಧ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದೆ. ಕೇವಲ 10 ರನ್’ಗಳಿಸುವಷ್ಟರಲ್ಲಿ ಕರ್ನಾಟಕ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮೈಸೂರು[ಡಿ.25]: ಹಿಮಾಚಲ ಪ್ರದೇಶ ವಿರುದ್ಧ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡಿದ್ದು, ಆರಂಭಿಕ ಆಘಾತ ಅನುಭವಿಸಿದೆ. ಕರ್ನಾಟಕ 10 ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಬೌಲರ್ ಕನ್ವರ್ ಅಭಿನಯ್ ಸಿಂಗ್ ಮೊದಲ ಓವರ್’ನ ಮೊದಲ ಎಸೆತದಲ್ಲೇ ಮಯಾಂಕ್ ಅಗರ್’ವಾಲ್ ಅವರನ್ನು ಪೆವಿಲಿಯನ್ನಿಗಟ್ಟಿದರು. ತಾವೆಸದ ಎರಡನೇ ಓವರ್’ನ ಮೊದಲ ಎಸೆತದಲ್ಲಿ ದೇವದತ್ ಪಡಿಕ್ಕಲ್ ಅವರನ್ನು ಬಲಿ ಪಡೆದರು. ಇದಾದ ಬಳಿಕ ಕನ್ವರ್ ಎಸೆದ ಮೂರನೇ ಓವರ್’ನ 3ನೇ ಎಸೆತದಲ್ಲಿ ರವಿಕುಮಾರ್ ಸಮರ್ಥ್ ಅವರನ್ನು ಪೆವಿಲಿನ್ನಿಗಟ್ಟಿದರು. ಮೂರು ವಿಕೆಟ್’ಗಳು ಕನ್ವರ್ ಪಾಲಾದವು. ಇದೀಗ ನಾಯಕ ಕರುಣ್ ನಾಯರ್[10] ಹಾಗೂ ಡಿ. ನಿಶ್ಚಲ್[12] ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಭಾರತ ‘ಎ’ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾಗೆ ಸ್ಥಾನ
2019-20ರ ರಣಜಿ ಟ್ರೋಫಿ ಋುತುವಿನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಕರ್ನಾಟಕ, ಇದೀಗ ಕರುಣ್ ಹಾಗೂ ನಿಶ್ಚಲ್ ಉತ್ತಮ ಬ್ಯಾಟಿಂಗ್ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕೊನೆ ಓವರ್‌ನಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ, ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. 2 ಪಂದ್ಯಗಳಿಂದ ಒಟ್ಟು 9 ಅಂಕ ಕಲೆಹಾಕಿರುವ ಕರ್ನಾಟಕ, ಎಲೈಟ್ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದು ಅಗ್ರ 5ರಲ್ಲಿ ಉಳಿದುಕೊಳ್ಳುವುದು ರಾಜ್ಯ ತಂಡದ ಮುಂದಿರುವ ಸವಾಲಾಗಿದೆ.
ಎಲೈಟ್ ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಒಟ್ಟು 18 ತಂಡಗಳಿದ್ದು, ಗುಂಪು ಹಂತದ ಪಂದ್ಯಗಳು ಮುಕ್ರಾಯಗೊಂಡ ಬಳಿಕ ಅಗ್ರ 5 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿವೆ.
ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೋಲುಂಡರೂ, ಕಳೆದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆದ್ದು ಆತ್ಮವಿಶ್ವಾಸ ಗಳಿಸಿರುವ ಹಿಮಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಪ್ರಬಲ ಪೈಪೋಟಿ ಎದುರಾಗಿದೆ. ಮೋರೆ ಅನುಪಸ್ಥಿತಿಯಲ್ಲಿ ಹಿರಿಯ ಹಾಗೂ ಅನುಭವಿ ವೇಗಿ ಅಭಿಮನ್ಯು ಮಿಥುನ್ ಮೇಲಿನ ಜವಾಬ್ದಾರಿ ಹೆಚ್ಚಾಗಲಿದೆ. ಎಡಗೈ ವೇಗಿ ಪ್ರತೀಕ್ ಜೈನ್ ಇಲ್ಲವೇ ಕೆ.ಎಸ್.ದೇವಯ್ಯಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ ಹಾಗೂ ಜೆ.ಸುಚಿತ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ನಾಯಕ ಕರುಣ್ ನಾಯರ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ಇತರ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಡಿ.ನಿಶ್ಚಲ್ ಸಹ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಕರ್ನಾಟಕ ಸಾಂಘಿಕ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ.
ಹಿಮಾಚಲ ಪ್ರದೇಶ ತನ್ನ ಬೌಲಿಂಗ್ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಕಳೆದೆರಡೂ ಪಂದ್ಯಗಳಲ್ಲಿ ತಂಡ ಯಾವುದೇ ಇನ್ನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚು ರನ್ ಕಲೆಹಾಕಿಲ್ಲ. ಕರ್ನಾಟಕ ಬ್ಯಾಟ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕಿದರೆ, ಗೆಲುವು ಸುಲಭವಾಗಲಿದೆ.