ರಣಜಿ ಟ್ರೋಫಿ: ಕರ್ನಾಟಕ vs ಮಧ್ಯಪ್ರದೇಶ ಪಂದ್ಯ ಡ್ರಾ
ಮಳೆಯ ಅಡಚಣೆಯ ನಡುವೆ ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವಿನ ಮೊದಲ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಇಂದೋರ್: ಮಾಜಿ ಚಾಂಪಿಯನ್‌ಗಳಾದ ಕರ್ನಾಟಕ ಹಾಗೂ ಮಧ್ಯ ಪ್ರದೇಶ ನಡುವಿನ ಈ ಋತುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯ ಡ್ರಾಗೊಂಡಿದೆ. ಪಂದ್ಯದ ಬಹುತೇಕ ಅವಧಿ ಮಳೆಗೆ ಆಹುತಿಯಾದ ಕಾರಣ ಇತ್ತಂಡಗಳ ಮೊದಲ ಇನ್ನಿಂಗ್ಸ್ ಕೂಡಾ ಮುಕ್ತಾಯಗೊಳ್ಳದೆ ಪಂದ್ಯ ಡ್ರಾ ಆಯಿತು. ಇದರೊಂದಿಗೆ ಉಭಯ ತಂಡಗಳು ತಲಾ 1 ಅಂಕಕ್ಕೆ ತೃಪ್ತಿಪಟ್ಟುಕೊಂಡವು. 4 ದಿನಗಳ ಪಂದ್ಯದಲ್ಲಿ ಕೇವಲ 215 ಓವರ್ ಆಟ ನಡೆಯಿತು.
ಮೊದಲು ಬ್ಯಾಟ್ ಮಾಡಿದ್ದ ಮಧ್ಯ ಪ್ರದೇಶ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 425 ರನ್ ಗಳಿಸಿತ್ತು. ತಂಡ ಕೊನೆ ದಿನವಾದ ಸೋಮವಾರ ಬ್ಯಾಟ್ ಮಾಡದೆ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 75 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ನಾಯಕ ಮಯಾಂಕ್ ಅಗರ್‌ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ನಿಕಿನ್ ಜೋಸ್(99) ಶತಕದ ಅಂಚಿನಲ್ಲಿ ಎಡವಿದರು. 72ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಶ್ರೇಯಸ್ ಗೋಪಾಲ್(ಔಟಾಗದೆ 60) ಆಸರೆಯಾದರು. ಕಾರ್ತಿಕೇಯ 3 ವಿಕೆಟ್ ಕಿತ್ತರು.
ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕ್; ಭಾರತ ವನಿತೆಯರ ಸೆಮಿಫೈನಲ್ ಕನಸು ಭಗ್ನ!
ಸ್ಕೋರ್: ಮಧ್ಯಪ್ರದೇಶ 425/8 ಡಿಕ್ಲೇರ್, ಕರ್ನಾಟಕ 206/5 (ಜೋಸ್ 99, ಶ್ರೇಯಸ್ 60*, ಕಾರ್ತಿಕೇಯ 3-68)
ಅ.18ರಿಂದ ಆಲೂರಲ್ಲಿ ಕರ್ನಾಟಕ vs ಕೇರಳ
ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಅ.18ರಿಂದ ಕೇರಳ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಅಂ-23 ಕ್ರಿಕೆಟ್: ಕರ್ನಾಟಕ ವಿರುದ್ಧ ತಮಿಳ್ನಾಡು 165/4
ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಸಿ.ಕೆ.ನಾಯ್ಡು ಅಂಡರ್-23 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ತಮಿಳುನಾಡು 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 165 ರನ್ ಕಲೆಹಾಕಿದೆ. ಮಳೆಯಿಂದಾಗಿ ಮೊದಲ ದಿನದಾಟ ನಡೆದಿರಲಿಲ್ಲ. 2ನೇ ದಿನವಾದ ಸೋಮವಾರವೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. 2 ದಿನಗಳಲ್ಲಿ ಕೇವಲ 49 ಓವರ್ ಆಟ ನಡೆದಿದ್ದು, ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚು. ನಾಯಕ ವಿಮಲ್ ಕುಮಾರ್ 82 ರನ್ ಗಳಿಸಿ ತಮಿಳುನಾಡಿಗೆ ಆಸರೆಯಾದರು. ಕರ್ನಾಟಕ ಪರ ಶಶಿ ಕುಮಾರ್ ಎರಡು, ಪರಾಸ್ ಆರ್ಯ ಒಂದು ವಿಕೆಟ್ ಕಿತ್ತರು.
ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಬಿಗ್ ಶಾಕ್; ಕೈಕೊಟ್ಟ ದುಬಾರಿ ಆಟಗಾರ!
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಇಂಪ್ಯಾಕ್ಟ್ ಆಟಗಾರ ನಿಯಮ ರದ್ದು
ನವದೆಹಲಿ: ನ.23ರಿಂದ ಡಿ.15ರ ವರೆಗೆ ನಡೆಯಲಿರುವ ಈ ಬಾರಿಯ ಸೆಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಿಂದ ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಕೈ ಬಿಡಲಾಗಿದೆ. ಈ ಬಗ್ಗೆ ಬಿಸಿಸಿಐ ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕಳೆದ ಬಾರಿ ಮುಷ್ತಾಕ್ ಅಲಿ ಲೀಗ್‌ನಲ್ಲೇ ಇಂಪ್ಯಾಕ್ಟ್ ಆಟಗಾರ ನಿಯಮ ಜಾರಿಗೊಳಿಸಲಾಗಿತ್ತು. ಬಳಿಕ ಐಪಿಎಲ್‌ನಲ್ಲೂ ಈ ನಿಮಯವನ್ನು ಪರಿಚಯಿಲಾಗಿತ್ತು. ಆದರೆ ಈ ನಿಯಮ ಆಲ್ರೌಂಡ್ ಆಟಗಾರರಿಗೆ ಅನಾನುಕೂಲವಾಗಲಿರುವ ಕಾರಣ ಈ ಬಾರಿ ದೇಸಿ ಟಿ20 ಲೀಗ್‌ನಿಂದ ನಿಯಮವನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ ಓವರ್‌ಗೆ ಎರಡು ಬೌನ್ಸರ್ ನಿಯಮವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ.