ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇದರಿಂದ ಆ ಆಟಗಾರ 6 ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯುತ್ತಿದ್ದಾರೆ
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ನಡೆಯುತ್ತಿವೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ರಣತಂತ್ರ ಹೆಣೆಯುತ್ತಿವೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಯೊಂದಕ್ಕೆ ಗರಿಷ್ಠ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಸಾಕಷ್ಟು ಅಳೆದುತೂಗಿ ಕೆಲ ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಇದೆಲ್ಲದರ ನಡುವೆ ಆರ್‌ಸಿಬಿ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಆರ್‌ಸಿಬಿ ತಂಡದ ದುಬಾರಿ ಆಟಗಾರರಾಗಿರುವ ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಸರ್ಜರಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಮುಂದಿನ ಆರು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡಕ್ಕೆ ಕ್ಯಾಮರೋನ್ ಗ್ರೀನ್ ಅವರನ್ನು ರೀಟೈನ್ ಮಾಡಿಕೊಳ್ಳಬೇಕೋ ಅಥವಾ ರಿಲೀಸ್ ಮಾಡಬೇಕೋ ಎನ್ನುವ ಕುರಿತಾಗಿ ಗೊಂದಲಕ್ಕೆ ಸಿಲುಕಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಕ್ಯಾಮರೋನ್ ಗ್ರೀನ್ ಅವರನ್ನು 17.5 ಕೋಟಿ ರುಪಾಯಿಗೆ ಆರ್‌ಸಿಬಿ ಟ್ರೇಡ್ ಮಾಡಿತ್ತು. ಆರ್‌ಸಿಬಿ ಪರ ಕ್ಯಾಮರೋನ್ ಗ್ರೀನ್ ಸಾಧಾರಣ ಪ್ರದರ್ಶನ ತೋರಿದ್ದರು.
ಆಸ್ಟ್ರೇಲಿಯಾ ಎದುರು ಸೋತರೇನಂತೆ, ಈಗಲೂ ಇದೆ ಹರ್ಮನ್‌ಪ್ರೀತ್ ಕೌರ್ ಪಡೆಗೆ ಸೆಮೀಸ್‌ಗೇರುವ ಬೆಸ್ಟ್ ಚಾನ್ಸ್!
ಕ್ಯಾಮರೋನ್ ಗ್ರೀನ್ ಸೊಂಟ ನೋವು ಕಾಣಿಸಿಕೊಂಡ ಬೆನ್ನಲ್ಲೇ ಸ್ಕ್ಯಾನ್‌ಗೆ ಒಳಗಾಗಿದ್ದರು. ಈ ಸ್ಕ್ಯಾನ್ ಪರಿಶೀಲಿಸಿದಾಗ ಅವರಿಗೆ ಅಪರೂಪದ ಸಮಸ್ಯೆ ಇರುವುದು ಕಂಡು ಬಂದಿದೆ. ಹೀಗಾಗಿ ಕ್ಯಾಮರೋನ್ ಗ್ರೀನ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ ಆರು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಕ್ಯಾಮರೋನ್ ಗ್ರೀನ್ ಮುಂಬರುವ ಐಪಿಎಲ್ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಭೀತಿ ಎದುರಾಗಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಗ್ರೀನ್ ಔಟ್:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22ರಿಂದ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಈ ಸರಣಿ ಸಾಕಷ್ಟು ಮಹತ್ವದ್ದೆನಿಸಿದೆ. ಆಸ್ಟ್ರೇಲಿಯಾ ಪರ ಟೆಸ್ಟ್ ಸರಣಿಯಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಕ್ಯಾಮರೋನ್ ಗ್ರೀನ್, ಉಪಯುಕ್ತ ಬೌಲರ್ ಆಗಿಯೂ ಸೈ ಎನಿಸಿಕೊಂಡಿದ್ದರು. ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಗ್ರೀನ್ ಅನುಪಸ್ಥಿತಿ ಕಾಂಗರೂ ಪಡೆಯನ್ನು ಕಾಡುವ ಸಾಧ್ಯತೆಯಿದೆ.
