ಛತ್ತೀಸ್‌ಗಢ ಎದುರು 7 ವಿಕೆಟ್‌ ಜಯ ಸಾಧಿಸಿದ ಕರ್ನಾಟಕರಣಜಿ ಟ್ರೋಫಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದ ಮಯಾಂಕ್ ಅಗರ್‌ವಾಲ್ ಪಡೆಕ್ವಾರ್ಟರ್ ಫೈನಲ್‌ ಪ್ರವೇಶಿಸುವ ಕನಸು ಜೀವಂತವಾಗಿರಿಸಿಕೊಂಡ ರಾಜ್ಯ ತಂಡ

ಬೆಂಗಳೂರು(ಜ.07): 2022-23ರ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಕರ್ನಾಟಕ 2ನೇ ಗೆಲುವು ದಾಖಲಿಸಿದ್ದು, ಕ್ವಾರ್ಟರ್‌ಫೈನಲ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಛತ್ತೀಸ್‌ಗಢ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 7 ವಿಕೆಟ್‌ ಜಯ ಸಾಧಿಸಿತು. ಇದರೊಂದಿಗೆ 6 ಅಂಕ ಸಂಪಾದಿಸಿ ಎಲೈಟ್‌ ‘ಸಿ’ ಗುಂಪಿನಲ್ಲಿ ಒಟ್ಟು 19 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ರಾಜಸ್ಥಾನ 14 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಛತ್ತೀಸ್‌ಗಢ, ಕೇರಳ ತಲಾ 13 ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಪಂದ್ಯದ ಕೊನೆ ದಿನವಾದ ಶುಕ್ರವಾರ ಕರ್ನಾಟಕ ಅಸಾಧಾರಣ ಬೌಲಿಂಗ್‌ ಪ್ರದರ್ಶಿಸಿ ಛತ್ತೀಸ್‌ಗಢವನ್ನು 177ಕ್ಕೆ ಆಲೌಟ್‌ ಮಾಡಿತು. ಗೆಲುವಿಗೆ 123 ರನ್‌ ಗುರಿ ಪಡೆದ ರಾಜ್ಯ 23.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯ ದಾಖಲಿಸಿತು. ಮೊದಲ ಇನ್ನಿಂಗ್‌್ಸನಲ್ಲಿ 67 ರನ್‌ ಸಿಡಿಸಿದ್ದ ನಿಕಿನ್‌ ಜೋಸ್‌ ಔಟಾಗದೆ 44 ರನ್‌ ಗಳಿಸಿದರು. ಮನೀಶ್‌ ಪಾಂಡೆ 27, ಆರ್‌.ಸಮಥ್‌ರ್‍ 24, ನಾಯಕ ಮಯಾಂಕ್‌ ಅಗರ್‌ವಾಲ್‌ 14 ರನ್‌ ಕೊಡುಗೆ ನೀಡಿದರು.

ವೈಶಾಖ್‌ ಮಾರಕ ದಾಳಿ

ಇದಕ್ಕೂ ಮೊದಲು ಗುರುವಾರ 55 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿ 2 ವಿಕೆಟ್‌ಗೆ 35 ರನ್‌ ಗಳಿಸಿದ್ದ ಛತ್ತೀಸ್‌ಗಢವನ್ನು ಶುಕ್ರವಾರ ವೇಗಿ ವೈಶಾಕ್‌ ಇನ್ನಿಲ್ಲದಂತೆ ಕಾಡಿದರು. ಮೊದಲ ಇನ್ನಿಂಗ್ಸಲ್ಲಿ ಕರ್ನಾಟಕಕ್ಕೆ ಸವಾಲೆಸೆದಿದ್ದ ಅಮನ್‌ದೀಪ್‌ ಹಾಗೂ ಆಶುತೋಷ್‌ 2ನೇ ಇನ್ನಿಂಗ್ಸಲ್ಲೂ ಕೆಲ ಹೊತ್ತು ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಂತರು. 3ನೇ ವಿಕೆಟ್‌ಗೆ 60 ರನ್‌ ಜೊತೆಯಾಟವಾಡಿದರು.

Ind vs SL: 2ನೇ ಪಂದ್ಯ ಸೋತರೂ ಟೀಂ ಇಂಡಿಯಾ ವೇಗಿಗಳನ್ನು ಸಮರ್ಥಿಸಿಕೊಂಡ ಕೋಚ್ ರಾಹುಲ್ ದ್ರಾವಿಡ್..!

ಆದರೆ ಈ ಜೋಡಿಯನ್ನು ಬೇರ್ಪಡಿಸಿದ ವೈಶಾಖ್‌ ತಮ್ಮ ಮಾರಕ ದಾಳಿ ಮುಂದುವರಿಸಿದರು. ಬಳಿಕ ಮಯಾಂಕ್‌ ಶರ್ಮಾ(46) ಜೊತೆ ಸೇರಿ ಅಮನ್‌ದೀಪ್‌(50) ಹೋರಾಟ ನಡೆಸಿದರೂ, ರಾಜ್ಯಕ್ಕೆ ದೊಡ್ಡ ಗುರಿ ನೀಡಲು ಸಾಧ್ಯವಾಗಲಿಲ್ಲ. ವೈಶಾಕ್‌ 59ಕ್ಕೆ 5 ವಿಕೆಟ್‌ ಕಿತ್ತರೆ, ಕೆ.ಗೌತಮ್‌ 2 ವಿಕೆಟ್‌ ಕಬಳಿಸಿದರು. ಚಹಾ ವಿರಾಮಕ್ಕೂ ಮೊದಲೇ ಛತ್ತೀಸ್‌ಗಢವನ್ನು ಆಲೌಟ್‌ ಮಾಡಿದ ರಾಜ್ಯ ತಂಡಕ್ಕೆ ಗುರಿ ಬೆನ್ನತ್ತಲು ಸುಮಾರು 40 ಓವರ್‌ ಸಿಕ್ಕಿತು.

ಸ್ಕೋರ್‌: ಛತ್ತೀಸ್‌ಗಢ 311/10 ಮತ್ತು 177/10(ಅಮನ್‌ದೀಪ್‌ 50, ವೈಶಾಕ್‌ 5-59), ಕರ್ನಾಟಕ 366/10 ಮತ್ತು 128/3 (ನಿಕಿನ್‌ 44*, ಮನೀಶ್‌ 27, ಸುಮಿತ್‌ 2-35)

ಜ.10ರಿಂದ ರಾಜಸ್ಥಾನ ವಿರುದ್ಧ ಹಣಾಹಣಿ

ಕರ್ನಾಟಕ ತಂಡ 5ನೇ ಪಂದ್ಯದಲ್ಲಿ ಜ.10ರಿಂದ ರಾಜಸ್ಥಾನ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ಬೆಂಗಳೂರಿನ ಆಲೂರು ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ರಾಜಸ್ಥಾನ 4 ಪಂದ್ಯಗಳಲ್ಲಿ 1 ಗೆಲುವು, 3 ಡ್ರಾನೊಂದಿಗೆ 14 ಅಂಕ ಗಳಿಸಿ 2ನೇ ಸ್ಥಾನದಲ್ಲಿದೆ.

ಜ.9ರಿಂದ ಬೆಂಗಳೂರಲ್ಲಿ ಅಂಧ ಮಹಿಳೆಯರ ಟಿ20

ಬೆಂಗಳೂರು: 3ನೇ ಆವೃತ್ತಿಯ ರಾಷ್ಟ್ರೀಯ ಅಂಧ ಮಹಿಳೆಯರ ಟಿ20 ಕ್ರಿಕೆಟ್‌ ಟೂರ್ನಿ ಜ.9ರಿಂದ 13ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ನಗರದ 4 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಡಾ.ಜಿ.ಮಹಾಂತೇಶ್‌, ಈ ಟೂರ್ನಿಯ ಮೂಲಕ 2023ರ ಬರ್ಮಿಂಗ್‌ಹ್ಯಾಮ್‌ ವಿಶ್ವ ಅಂಧರ ಕ್ರೀಡಾಕೂಟಕ್ಕೆ ಭಾರತ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡುತ್ತೇವೆ. ಹಾಲಿ ಚಾಂಪಿಯನ್‌ ಕರ್ನಾಟಕ ಸೇರಿದಂತೆ 16 ತಂಡಗಳು ಸ್ಪರ್ಧಿಸಲಿದ್ದು, ತಲಾ 4 ತಂಡಗಳ 4 ಗುಂಪುಗಳನ್ನಾಡಿ ವಿಂಗಡಿಸಲಾಗಿದೆ. 24 ಲೀಗ್‌ ಪಂದ್ಯಗಳು ಸೇರಿದಂತೆ ಒಟ್ಟು 27 ಪಂದ್ಯಗಳು ನಡೆಯಲಿವೆ ಎಂದರು.

ಜ.12, 13ಕ್ಕೆ ಸೆಮಿಫೈನಲ್‌, ಫೈನಲ್‌ ಪಂದ್ಯಗಳಿಗೆ ದೊಮ್ಮಸಂದ್ರದ ಆಲ್ಟಿಯೊರ್‌ ಸ್ಪೋಟ್ಸ್‌ರ್‍ ಗ್ರೀನ್‌ ಪಾರ್ಕ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂದರು. ಅಲ್ಲದೇ, ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಟೂರ್ನಿಗೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ ಎಂದರು.