2022-23ನೇ ಸಾಲಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿ ಇಂದಿನಿಂದ ಆರಂಭಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಸರ್ವೀಸಸ್ ಸವಾಲುಕರ್ನಾಟಕ ತಂಡವನ್ನು ಮುನ್ನಡೆಸಲಿರುವ ಮಯಾಂಕ್‌ ಅಗರ್‌ವಾಲ್

ಬೆಂಗಳೂರು(ಡಿ.13): 2022-23ನೇ ಸಾಲಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿ ಮಂಗಳವಾರ ಆರಂಭವಾಗಲಿದ್ದು, 8 ಬಾರಿ ಚಾಂಪಿಯನ್‌ ಕರ್ನಾಟಕ ಮೊದಲ ಪಂದ್ಯದಲ್ಲಿ ಸರ್ವಿಸಸ್‌ ಸವಾಲನ್ನು ಎದುರಿಸಲಿದೆ. ಟೂರ್ನಿಯಲ್ಲಿ 38 ತಂಡಗಳು ಕಣಕ್ಕಿಳಿಯಲಿದ್ದು, ಎಲೈಟ್‌ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ರಾಜ್ಯ ತಂಡ ಮೊದಲೆರಡು ಪಂದ್ಯಗಳನ್ನು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. 

ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದ ಕರ್ನಾಟಕ ಕ್ರಿಕೆಟ್ ತಂಡ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಮಯಾಂಕ್‌ ಅಗರ್‌ವಾಲ್‌ ತಂಡ ಮುನ್ನಡೆಸಲಿದ್ದಾರೆ. ಕಿರಿಯರ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ವಿಶಾಲ್‌ ಜೊತೆ ನಿಕಿನ್‌ ಜೋಸ್‌ಗೂ ಮೊದಲೆರಡು ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಲಭಿಸಿದೆ.

ಪಂದ್ಯ ಮಳೆಗೆ ಬಲಿ?

ಚಂಡಮಾರುತ ಹಿನ್ನೆಲೆ ಬೆಂಗಳೂರಿನಲ್ಲಿ 2-3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಇನ್ನೆರಡು ದಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮಂಗಳವಾರ ಪಂದ್ಯ ಆರಂಭವಾಗುವ ಬಗ್ಗೆ ಅನುಮಾನವಿದ್ದು, ಇಡೀ ಪಂದ್ಯವೇ ಮಳೆಗೆ ಬಲಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಮೊದಲೆರಡು ರಣಜಿ ಪಂದ್ಯಗಳಿಗೆ ಕರ್ನಾಟಕ ತಂಡ ಹೀಗಿದೆ ನೋಡಿ:

ತಂಡ: ಮಯಾಂಕ್‌ ಮಯಾಂಕ್‌(ನಾಯಕ), ರವಿಕುಮಾರ್ ಸಮರ್ಥ್, ನಿಕಿನ್‌ ಜೋಶ್, ವಿಶಾಲ್‌, ಮನೀಶ್‌ ಪಾಂಡೆ, ಸಿದ್ಧಾರ್ಥ್‌, ಶರತ್‌ ಬಿ.ಆರ್‌., ಶರತ್‌ ಶ್ರೀನಿವಾಸ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ರೋನಿತ್‌ ಮೋರೆ, ವಿ.ಕೌಶಿಕ್‌, ವಿದ್ವತ್‌ ಕಾವೇರಪ್ಪ, ವೈಶಾಖ್‌, ಶುಭಾಂಗ್‌ ಹೆಗ್ಡೆ.

ಮಾ.3ರಿಂದ ಚೊಚ್ಚಲ ಮಹಿಳಾ ಐಪಿಎಲ್‌?

ಮುಂಬೈ: ಚೊಚ್ಚಲ ಮಹಿಳಾ ಐಪಿಎಲ್‌ ನಡೆಸಲು ಸಿದ್ಧತೆ ಆರಂಭಿಸಿರುವ ಬಿಸಿಸಿಐ ಪಂದ್ಯಾವಳಿಯನ್ನು ಮಾ.3ರಿಂದ 26ರ ವರೆಗೂ ನಡೆಸಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಟೂರ್ನಿಯಲ್ಲಿ 5 ತಂಡಗಳು ಸ್ಪರ್ಧಿಸಲಿವೆ. ಮಹಿಳಾ ಐಪಿಎಲ್‌ನಿಂದಾಗಿ ಪುರುಷರ ಐಪಿಎಲ್‌ 1 ವಾರ ತಡವಾಗಿ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ ಏ.1ರಿಂದ 16ನೇ ಆವೃತ್ತಿ ಆರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ಗೆ ಪ್ರಮೋಷನ್, ಗಂಡು ಮಗುವಿನ ತಂದೆಯಾದ ಬ್ಯಾಟ್ಸ್‌ಮನ್!

ಬಿಸಿಸಿಐ ಗುತ್ತಿಗೆ: ರಹಾನೆ, ಇಶಾಂತ್‌ಗೆ ಕೊಕ್‌?

ನವದೆಹಲಿ: ಕಳಪೆ ಫಾರ್ಮ್‌ನಿಂದ ತಂಡದಿಂದಲೇ ಹೊರಬಿದ್ದಿರುವ ಭಾರತದ ಹಿರಿಯ ಟೆಸ್ಟ್‌ ಆಟಗಾರರಾದ ಅಜಿಂಕ್ಯ ರಹಾನೆ ಹಾಗೂ ಇಶಾಂತ್‌ ಶರ್ಮಾ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಹೊರಗುಳಿಯುವ ಸಾಧ್ಯತೆ ಇದೆ. ಡಿಸೆಂಬರ್ 21ಕ್ಕೆ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆ ನಡೆಯಲಿದ್ದು, ಅದರಲ್ಲಿ 2022-23ರ ಗುತ್ತಿಗೆ ಪಟ್ಟಿ ಪರಿಷ್ಕರಣೆಗೊಳ್ಳಲಿದೆ. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಶುಭ್‌ಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ಗೆ ಬಡ್ತಿ ಸಿಗುವುದು ಬಹುತೇಕ ಖಚಿತವಾಗಿದೆ. ಹಾರ್ದಿಕ್‌ ಪಾಂಡ್ಯಗೂ ‘ಸಿ’ ದರ್ಜೆಯಿಂದ ‘ಬಿ’ ದರ್ಜೆಗೆ ಬಡ್ತಿ ಸಿಗಲಿದೆ ಎನ್ನಲಾಗಿದೆ.