ಬೆಂಗಳೂರು(ಫೆ.04): 2019-20ರ ರಣಜಿ ಟ್ರೋಫಿಯ ನಾಕೌಟ್‌ ಹಂತಕ್ಕೇರಲು ಪೈಪೋಟಿ ಹೆಚ್ಚಾಗಿದ್ದು, ರೇಸ್‌ನಲ್ಲಿ ಕರ್ನಾಟಕ ತಂಡವೂ ಇದೆ. ಮಂಗಳವಾರ ಶಿವಮೊಗ್ಗದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲು ಕರ್ನಾಟಕ ಸೆಣಸಲಿದೆ. 

ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ, 24 ಅಂಕಗಳನ್ನು ಸಂಪಾದಿಸಿದ್ದು ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನಲ್ಲಿ 4ನೇ ಸ್ಥಾನ ಪಡೆದಿದೆ. ಕಳೆದ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಬೋನಸ್‌ ಅಂಕದೊಂದಿಗೆ ಗೆಲುವು ಸಾಧಿಸಿದ್ದು, ತಂಡವನ್ನು ನಾಕೌಟ್‌ಗೇರುವ ನೆಚ್ಚಿನ ತಂಡಗಳ ಪೈಕಿ ನಿಲ್ಲಿಸಿದೆ. ಗುಂಪು ಹಂತದ ಕೊನೆ ಎರಡು ಪಂದ್ಯಗಳನ್ನು ಕರ್ನಾಟಕ, ತವರಿನಲ್ಲೇ ಆಡಲಿದ್ದು ಎರಡಲ್ಲೂ ಅಗ್ರಸ್ಥಾನಕ್ಕೇರುವ ಸಾಧ್ಯತೆಯೂ ಇರಲಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಬೋನಸ್‌ ಗೆಲುವು!

ಮತ್ತೊಂದೆಡೆ ಮಧ್ಯಪ್ರದೇಶ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಸೋತು, ಇನ್ನುಳಿದ 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ತಂಡ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದು, ಈಗಾಗಲೇ ಕ್ವಾರ್ಟರ್‌ ಫೈನಲ್‌ ಪೈಪೋಟಿಯಿಂದ ಹೊರಬಿದ್ದಿದೆ. ತಂಡದ ಪಾಲಿಗಿದು ಕೇವಲ ಔಪಚಾರಿಯ ಪಂದ್ಯವಷ್ಟೆ.

ದೇವದತ್‌ ಬಲ: ನಾಕೌಟ್‌ ಹಂತ ಹತ್ತಿರುವಾಗುತ್ತಿದ್ದಂತೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ದೇವದತ್‌ ಪಡಿಕ್ಕಲ್‌ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. 20 ವರ್ಷದ ದೇವದತ್‌ 6 ಪಂದ್ಯಗಳಿಂದ 6 ಅರ್ಧಶತಕ ಸಹಿತ 504 ರನ್‌ ಕಲೆಹಾಕಿದ್ದಾರೆ. ಆರ್‌.ಸಮರ್ಥ್ 272 ರನ್‌ ಗಳಿಸಿದ್ದಾರೆ. ಇನ್ಯಾರು 200 ರನ್‌ ದಾಟಿಲ್ಲ. ಈ ಆವೃತ್ತಿಯಲ್ಲಿ ಕರ್ನಾಟಕದ ಯಾವ ಬ್ಯಾಟ್ಸ್‌ಮನ್‌ನಿಂದಲೂ ಒಂದೇ ಒಂದು ಶತಕ ದಾಖಲಾಗಿಲ್ಲ.

ಬೌಲರ್‌ಗಳೇ ಆಧಾರ: ಕರ್ನಾಟಕ ಅಜೇಯವಾಗಿ ಉಳಿಯಲು ಬೌಲರ್‌ಗಳೇ ಪ್ರಮುಖ ಕಾರಣ. ಅನುಭವಿ ವೇಗಿ ಅಭಿಮನ್ಯು ಮಿಥುನ್‌ 20 ವಿಕೆಟ್‌ ಕಿತ್ತರೆ, ರೋನಿತ್‌ ಹಾಗೂ ಪ್ರತೀಕ್‌ ತಲಾ 15, ಸ್ಪಿನ್ನರ್‌ ಕೆ.ಗೌತಮ್‌ 14 ವಿಕೆಟ್‌ ಕಬಳಿಸಿದ್ದಾರೆ. ಶ್ರೇಯಸ್‌ ಗೋಪಾಲ್‌ 6 ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ ಪಡೆದಿದ್ದು, ಉತ್ತಮ ಪ್ರದರ್ಶನ ತೋರಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಮಧ್ಯಪ್ರದೇಶ ತನ್ನ ಪ್ರಮುಖ ವೇಗಿ ಆವೇಶ್‌ ಖಾನ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಆವೇಶ್‌ 5 ಪಂದ್ಯಗಳಲ್ಲಿ 28 ವಿಕೆಟ್‌ ಕಿತ್ತಿದ್ದಾರೆ. 410 ರನ್‌ ಕಲೆಹಾಕಿರುವ ರಮೀಜ್‌ ಖಾನ್‌ ತಂಡ ಪ್ರಮುಖ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ