ನವದೆಹಲಿ(ಜ.31): ವೇಗಿ ರೋನಿತ್‌ ಮೋರೆ ಮನಮೋಹಕ ಬೌಲಿಂಗ್‌ ದಾಳಿ ನೆರವಿನಿಂದ ರೈಲ್ವೇಸ್‌ ವಿರುದ್ಧ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ 10 ವಿಕೆಟ್‌ಗಳ ಅಚ್ಚರಿಯ ಗೆಲುವು ಸಾಧಿಸಿ, 7 ಅಂಕ ಸಂಪಾದಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ಕಬಳಿಸಿದ್ದ ರೋನಿತ್‌, 2ನೇ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್‌ ಮೇಲೆ ಸವಾರಿ ನಡೆಸಿದರು. ಕೇವಲ 79 ರನ್‌ಗೆ ಆಲೌಟ್‌ ಆದ ಆತಿಥೇಯ ತಂಡ, ಕರ್ನಾಟಕಕ್ಕೆ 51 ರನ್‌ಗಳ ಸುಲಭ ಗುರಿ ನೀಡಿತು.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್‌ ಮುನ್ನಡೆ

3ನೇ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿದ್ದ ಕರ್ನಾಟಕ, ಗುರುವಾರ 211 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು. ಶರತ್‌ ಶ್ರೀನಿವಾಸ್‌ 62 ರನ್‌ ಗಳಿಸಿದರು. 29 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಬೌಲಿಂಗ್‌ ಆರಂಭಿಸಿದ ಕರ್ನಾಟಕ, ಅಸಾಧಾರಣ ಪ್ರದರ್ಶನ ತೋರಿತು. ಕೇವಲ 30 ಓವರ್‌ಗಳಲ್ಲಿ 79 ರನ್‌ಗಳಿಗೆ ರೈಲ್ವೇಸ್‌ ಆಲೌಟ್‌ ಆಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಮೃನಾಲ್‌ ದೇವಧರ್‌ (38) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ.

ರೋನಿತ್‌ 11 ಓವರಲ್ಲಿ 32 ರನ್‌ ನೀಡಿ 6 ವಿಕೆಟ್‌ ಕಬಳಿಸಿದರೆ, ಅಭಿಮನ್ಯು ಮಿಥುನ್‌ 9 ಓವರಲ್ಲಿ 17 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದಿದ್ದ ಪ್ರತೀಕ್‌, 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆದರು.

ಸುಲಭ ಗುರಿ ಬೆನ್ನತ್ತಿದ ಕರ್ನಾಟಕ ಕೇವಲ 8.2 ಓವರಲ್ಲಿ ಜಯದ ನಗೆ ಬೀರಿತು. ಆರಂಭಿಕರಾದ ರೋಹನ್‌ ಕದಂ (27) ಹಾಗೂ ದೇವದತ್‌ ಪಡಿಕ್ಕಲ್‌ (24) ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಅಂಕಪಟ್ಟಿಯಲ್ಲಿ 4ನೇ ಸ್ಥಾನ

6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 3ರಲ್ಲಿ ಡ್ರಾ ಸಾಧಿಸಿರುವ ಕರ್ನಾಟಕ, 24 ಅಂಕಗಳೊಂದಿಗೆ ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಒಟ್ಟು 18 ತಂಡಗಳಿರುವ ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪುಗಳಿಂದ 5 ತಂಡಗಳು ಮಾತ್ರ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆಯಲಿವೆ. ಕರ್ನಾಟಕಕ್ಕೆ ಇನ್ನೆರಡು ಪಂದ್ಯ ಬಾಕಿ ಇದ್ದು, ನಾಕೌಟ್‌ ಹಂತಕ್ಕೇರುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.

ಫೆ.4ರಿಂದ ಮ.ಪ್ರದೇಶ ವಿರುದ್ಧ ಸೆಣಸು

ಕರ್ನಾಟಕ ಗುಂಪು ಹಂತದಲ್ಲಿ ಬಾಕಿ ಇರುವ 2 ಪಂದ್ಯಗಳನ್ನು ತವರಿನಲ್ಲೇ ಆಡಲಿದೆ. ಫೆ.4ರಿಂದ ಶಿವಮೊಗ್ಗದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿರುವ ರಾಜ್ಯ ತಂಡ, ಫೆ.12ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ಆಡಲಿದೆ.