ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ದಿಟ್ಟ ಪ್ರದರ್ಶನಬಂಗಾಳ ಎದುರು ಭರ್ಜರಿ ಪ್ರದರ್ಶನ ತೋರಿದ ಜಯದೇವ್ ಉನಾದ್ಕತ್ ಪಡೆತಲಾ 3 ವಿಕೆಟ್ ಕಬಳಿಸಿದ ಚೇತನ್ ಸಕಾರಿಯಾ, ಜಯದೇವ್ ಉನಾದ್ಕತ್
ಕೋಲ್ಕತಾ(ಫೆ.16): ಸೌರಾಷ್ಟ್ರ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಬಂಗಾಳ ತಂಡವು 2022-23ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ದಿನವೇ ಕೇವಲ 174 ರನ್‌ಗಳಿಗೆ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ ತಂಡವು ಮೊದಲ ದಿನದಾಟದಂತ್ಯದ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದ್ದು, ಇನ್ನು ಕೇವಲ 93 ರನ್‌ಗಳ ಹಿನ್ನಡೆಯಲ್ಲಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಮೈದಾನಕ್ಕಿಳಿದ ಆತಿಥೇಯ ಬಂಗಾಳ ತಂಡವು, ಸೌರಾಷ್ಟ್ರ ವೇಗಿಗಳಾದ ಜಯದೇವ್ ಉನಾದ್ಕತ್ ಹಾಗೂ ಚೇತನ್ ಸಕಾರಿಯಾ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಕೇವಲ ಎರಡು ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಮೊದಲ ಓವರ್‌ನಲ್ಲೇ ಜಯದೇವ್ ಉನಾದ್ಕತ್, ಇನ್‌ಫಾರ್ಮ್ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರನ್ನು ಪೆವಿಲಿಯನ್ನಿಗಟ್ಟಿದರೇ, ಎರಡನೇ ಓವರ್‌ನಲ್ಲಿ ಚೇತನ್ ಸಕಾರಿಯಾ ಮತ್ತೋರ್ವ ಆರಂಭಿಕ ಬ್ಯಾಟರ್ ಸುಮಂತ್ ಗುಪ್ತಾ ಹಾಗೂ ಸುದಿಪ್ ಘರಾಮಿಯವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಡಬಲ್ ಶಾಕ್ ನೀಡಿದರು. ಇನ್ನು ನಾಯಕ ಮನೋಜ್ ತಿವಾರಿ ಕೇವಲ 7 ರನ್ ಬಾರಿಸಿ ಜಯದೇವ್ ಉನಾದ್ಕತ್‌ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇನ್ನು ಬಂಗಾಳದ ನಂಬಿಗಸ್ಥ ಬ್ಯಾಟರ್ ಅನುಸ್ತೂಪ್ ಮಜುಂದಾರ್(16) ಹಾಗೂ ಆಕಾಶ್ ಘಟಕ್(17) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಸೌರಾಷ್ಟ್ರ ಬೌಲರ್‌ಗಳು ಅವಕಾಶ ನೀಡಲಿಲ್ಲ. ಪರಿಣಾಮ ಬಂಗಾಳ ತಂಡವು ಕೇವಲ 65 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.
ಸೌರಾಷ್ಟ್ರಕ್ಕೆ ಶಾಬಾಜ್-ಅಭಿಷೇಕ್ ಆಸರೆ: ಕೇವಲ 65 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು 100 ರನ್‌ಗಳೊಳಗೆ ಕುಸಿಯುವ ಭೀತಿಗೆ ಸಿಲುಕಿದ್ದ ಸೌರಾಷ್ಟ್ರ ತಂಡಕ್ಕೆ 7ನೇ ವಿಕೆಟ್‌ಗೆ ಆಲ್ರೌಂಡರ್ ಶಾಬಾಜ್ ಅಹಮ್ಮದ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೋರೆಲ್ 101 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲಿಗೆ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಆ ಬಳಿಕ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಶಾಬಾಜ್ ಅಹಮ್ಮದ್ 112 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 69 ರನ್ ಬಾರಿಸಿದರು. ಇನ್ನು ಅಭಿಷೇಕ್ ಪೋರೆಲ್ 98 ಎಸೆತಗಳನ್ನು ಎದುರಿಸಿ 50 ರನ್ ಸಿಡಿಸಿದರು. ಇನ್ನು ಅಪಾಯಕಾರಿಗುವ ಮುನ್ಸೂಚನೆ ನೀಡಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಧರ್ಮೇಂದ್ರ ಸಿಂಗ್ ಜಡೇಜಾ ಯಶಸ್ವಿಯಾದರು. ಶಾಬಾಜ್ ವಿಕೆಟ್ ಪತನವಾಗುತ್ತಿದ್ದಂತೆಯೇ ಬಂಗಾಳ ತಂಡವು ದಿಢೀರ್ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಬಂಗಾಳ ತಂಡವು 174 ರನ್‌ಗಳಿಗೆ ಸರ್ವಪತನ ಕಂಡಿತು.
Ranji Trophy Final: ಬೆಂಗಾಲ್‌ಗೆ ಆರಂಭಿಕ ಆಘಾತ, ಮೊದಲ 2 ಓವರ್‌ನಲ್ಲೇ 3 ವಿಕೆಟ್ ಪತನ
ಸೌರಾಷ್ಟ್ರ ತಂಡದ ಪರ ಜಯದೇವ್ ಉನಾದ್ಕತ್ ಹಾಗೂ ಚೇತನ್ ಸಕಾರಿಯಾ ತಲಾ ಎರಡೆರಡು ವಿಕೆಟ್ ಪಡೆದರೆ, ಚಿರಾಗ್ ಜಾನಿ ಮತ್ತು ಧರ್ಮೆಂದ್ರ ಸಿಂಗ್ ಜಡೇಜಾ ತಲಾ ಎರಡೆರಡು ವಿಕೆಟ್ ಉರುಳಿಸಿದರು.
ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡವು ಆರಂಭದಲ್ಲೇ ಜೈ ಗೋಹಿಲ್(6) ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಹಾರ್ವಿಕ್ ದೇಸಾಯಿ ಅಜೇಯ 38 ರನ್ ಬಾರಿಸಿದರೆ, ವಿಶ್ವರಾಜ್ ಜಡೇಜಾ 25 ರನ್ ಬಾರಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನೈಟ್ ವಾಚ್‌ಮನ್ ಚೇತನ್ ಸಕಾರಿಯಾ 2 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಬಂಗಾಳ: 174/10(ಮೊದಲ ಇನಿಂಗ್ಸ್)
ಶಾಬಾಜ್ ಅಹಮದ್: 69
ಅಭಿಷೇಕ್ ಪೋರೆಲ್: 50
ಚೇತನ್ ಸಕಾರಿಯಾ: 33/3
ಸೌರಾಷ್ಟ್ರ: 81/2
ಹಾರ್ವಿಕ್ ದೇಸಾಯಿ: 38*
ಮುಕೇಶ್ ಕುಮಾರ್: 23/1
(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)
