* ರಣಜಿ ಟ್ರೋಫಿ ಫೈನಲ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಮಧ್ಯಪ್ರದೇಶ* ಮುಂಬೈ ಎದುರು ಗೆಲ್ಲಲು ಮಧ್ಯಪ್ರದೇಶಕ್ಕೆ 108 ರನ್‌ಗಳ ಗುರಿ* ಎರಡನೇ ಇನಿಂಗ್ಸ್‌ನಲ್ಲಿ 269 ರನ್‌ಗಳಿಗೆ ಸರ್ವಪತನ ಕಂಡ ಮುಂಬೈ

ಬೆಂಗಳೂರು(ಜೂ.26): 2022ನೇ ಸಾಲಿನ ರಣಜಿ ಟ್ರೋಫಿ ಫೈನಲ್‌ (Ranji Trophy Final) ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ ಕ್ರಿಕೆಟ್ ತಂಡವು 269 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮಧ್ಯಪ್ರದೇಶ ತಂಡವು ರಣಜಿ ಟ್ರೋಫಿ ಗೆಲ್ಲಲು 108 ರನ್‌ಗಳ ಸಾಧಾರಣ ಗುರಿ ನೀಡಿದೆ. ವೇಗಿ ಕುಮಾರ ಕಾರ್ತಿಕೇಯ 4 ವಿಕೆಟ್ ಕಬಳಿಸುವ ಮೂಲಕ ಮುಂಬೈ ತಂಡವನ್ನು ದೊಡ್ಡ ಮೊತ್ತ ಕಲೆಹಾಕದಂತೆ ನೋಡಿಕೊಂಡರು.

ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ನಾಲ್ಕನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 113 ರನ್‌ಗಳಿಸಿದ್ದ ಮುಂಬೈ ತಂಡವು ಐದನೇ ದಿನದಾಟದ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದಾದ ಬಳಿಕ ಸುವೆದ್ ಪಾರ್ಕರ್‌ ಹಾಗೂ ಸರ್ಫರಾಜ್ ಖಾನ್‌ ಆಕರ್ಷಕ ಜತೆಯಾಟವಾಡುವ ಮೂಲಕ ತಂಡದ ಮೊತ್ತ ಇನ್ನೂರರ ಗಡಿ ದಾಟಲು ನೆರವಾದರು. ಸುವೆದ್ ಪಾರ್ಕರ್‌ ಸ್ಪೋಟಕ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಸುವೇದ್ ಪಾರ್ಕರ್ 58 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 51 ರನ್‌ ಬಾರಿಸಿ ಕುಮಾರ್ ಕಾರ್ತಿಕೇಯ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಈ ಬಾರಿರ ರಣಜಿ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸರ್ಫರಾಜ್ ಖಾನ್ 48 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 45 ರನ್ ಬಾರಿಸಿ ಪಾರ್ಥ್ ಸಹಾನಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ದಿಢೀರ್ ಕುಸಿದ ಮುಂಬೈ: 232 ರನ್‌ಗಳವರೆಗೂ ಕೇವಲ 5 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದ್ದ ಮುಂಬೈ ತಂಡವು ಸರ್ಫರಾಜ್ ಖಾನ್ ವಿಕೆಟ್ ಪತನವಾಗುತ್ತಿದ್ದಂತೆಯೇ ನಾಟಕೀಯ ಕುಸಿತ ಕಂಡಿತು. ಮುಂಬೈ ತಂಡವು ತನ್ನ ಖಾತೆಗೆ 37 ರನ್ ಸೇರಿಸುವಷ್ಟರಲ್ಲಿ ಇನ್ನುಳಿದ ಐದು ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯಿತು. ಮುಂಬೈ ತಂಡವು ಕೇವಲ 269 ರನ್‌ಗಳಿಸಿ ಸರ್ವಪತನ ಕಾಣುವ ಮೂಲಕ ಎರಡನೇ ಇನಿಂಗ್ಸ್‌ನಲ್ಲಿ 107 ರನ್‌ಗಳ ಮುನ್ನಡೆ ಸಾಧಿಸಿದೆ.

Scroll to load tweet…

Ranji Trophy ಚೊಚ್ಚಲ ರಣಜಿ ಟ್ರೋಫಿ ಕಿರೀಟ ಧರಿಸುವತ್ತ ಮಧ್ಯಪ್ರದೇಶ..!

ಮಧ್ಯಪ್ರದೇಶ ಕ್ರಿಕೆಟ್ ತಂಡದ ಪರ ವೇಗಿ ಕುಮಾರ ಕಾರ್ತಿಕೇಯ 98 ರನ್‌ ನೀಡಿ 4 ವಿಕೆಟ್ ಪಡೆದರು. ಇನ್ನು ಗೌರವ್ ಯಾದವ್ ಹಾಗೂ ಪಾರ್ಥ್‌ ಸಹಾನಿ ತಲಾ 2 ವಿಕೆಟ್‌ ಪಡೆದರು.