* ಚೊಚ್ಚಲ ರಣಜಿ ಟ್ರೋಫಿ ಗೆಲುವಿನ ಹೊಸ್ತಿಲಲ್ಲಿ ಮಧ್ಯಪ್ರದೇಶ ತಂಡ* ಮುಂಬೈ ಎದುರು 162 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿದ ಮಧ್ಯಪ್ರದೇಶ* ಎರಡನೇ ಇನಿಂಗ್ಸ್‌ ಆರಂಭಿಸಿರುವ ಮುಂಬೈ ಇನ್ನೂ 49 ರನ್‌ಗಳ ಹಿನ್ನೆಡೆಯಲ್ಲಿದೆ

ಬೆಂಗಳೂರು(ಜೂ.26): 2022ರ ರಣಜಿ ಟ್ರೋಫಿ ಫೈನಲ್‌ನಲ್ಲಿ (Ranji Trophy Final) ಮುಂಬೈ ವಿರುದ್ಧ ಮಧ್ಯಪ್ರದೇಶ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಯಶಸ್ವಿಯಾಗಿದ್ದು, ಚೊಚ್ಚಲ ಬಾರಿ ರಣಜಿ ಟ್ರೋಫಿ ಗೆಲ್ಲುವತ್ತ ಹೆಜ್ಜೆ ಇರಿಸಿದೆ. ಪಂದ್ಯ ಡ್ರಾ ಆದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದ ತಂಡವನ್ನು ವಿಜಯಿ ಎಂದು ಘೋಷಿಸಲಿದ್ದು, ಮಧ್ಯಪ್ರದೇಶ ಪ್ರಶಸ್ತಿ ಗೆಲ್ಲವುದು ಬಹುತೇಕ ಖಚಿತವಾಗಿದೆ.

3ನೇ ದಿನ 3 ವಿಕೆಟ್‌ಗೆ 368 ರನ್‌ ಕಲೆ ಹಾಕಿ ಕೇವಲ 6 ರನ್‌ ಹಿನ್ನಡೆಯಲ್ಲಿದ್ದ ಮಧ್ಯಪ್ರದೇಶ ಶನಿವಾರ 536 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿತು. ಇದರೊಂದಿಗೆ ತಂಡ 162 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಶುಕ್ರವಾರ 67 ರನ್‌ ಗಳಿಸಿದ್ದ ರಜತ್‌ ಪಾಟೀದಾರ್‌ 122 ರನ್‌ ಸಿಡಿಸಿ ಔಟಾದರು. ಇದಕ್ಕೂ ಮೊದಲು ತಂಡದ ಪರ ಯಶ್‌ ದುಬೆ, ಶುಭಂ ಶರ್ಮಾ ಕೂಡಾ ಶತಕ ಸಿಡಿಸಿದ್ದರು. ಶರನ್ಸ್‌ ಜೈನ್‌ 57 ರನ್‌ ಕೊಡುಗೆ ನೀಡಿದರು. ಶಮ್ಸ್‌ ಮುಲಾನಿ 5 ವಿಕೆಟ್‌ ಗೊಂಚಲು ಪಡೆದರೆ, ತುಷಾರ್‌ ದೇಶಪಾಂಡೆ 3, ಮೋಹಿತ್‌ 2 ವಿಕೆಟ್‌ ಪಡೆದರು.

Scroll to load tweet…

ಮುಂಬೈ ಉತ್ತಮ ಆರಂಭ: ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಮುಂಬೈ ಕ್ರಿಕೆಟ್ ತಂಡವು ಉತ್ತಮ ಆರಂಭ ಪಡೆದಿದ್ದು, 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 113 ರನ್‌ ಗಳಿಸಿದೆ. ತಂಡ ಇನ್ನೂ 49 ರನ್‌ ಹಿನ್ನಡೆಯಲ್ಲಿದೆ. ಪೃಥ್ವಿ ಶಾ 44 ರನ್‌ಗೆ ವಿಕೆಟ್‌ ಒಪ್ಪಿಸಿದ್ದು, ಅಮನ್‌ ಜಾಫರ್‌(30) ಕ್ರೀಸ್‌ನಲ್ಲಿದ್ದಾರೆ.

ಸ್ಕೋರ್‌

ಮುಂಬೈ ಮೊದಲ ಇನ್ನಿಂಗ್ಸ್‌ 374/10, 
ಮ.ಪ್ರದೇಶ ಮೊದಲ ಇನ್ನಿಂಗ್ಸ್‌ 536/10(3ನೇ ದಿನದಂತ್ಯಕ್ಕೆ 368/3) 
ಪಾಟೀದಾರ್‌ 122, ಜೈನ್‌ 57, 
ಮುಲಾನಿ 5-173, ದೇಶಪಾಂಡೆ 3-116), 

ಮುಂಬೈ 2ನೇ ಇನ್ನಿಂಗ್ಸ್‌ 113/2 
(ಪೃಥ್ವಿ 44, ಅಮನ್‌ ಔಟಾಗದೆ 30, ಗೌರವ್‌ 1-23)

ಲಂಕಾ ವಿರುದ್ಧ ಭಾರತಕ್ಕೆ ಟಿ20 ಸರಣಿ ಜಯ

ಡಾಂಬುಲಾ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ತೋರಿದ ಸುಧಾರಿತ ಪ್ರದರ್ಶನದ ನೆರವಿನಿಂದ ಭಾರತ ಮಹಿಳಾ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಮಹಿಳಾ ಕ್ರಿಕೆಟ್ ತಂಡವು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 20 ಓವರಲ್ಲಿ 7 ವಿಕೆಟ್‌ಗೆ ಕೇವಲ 125 ರನ್‌ ಕಲೆ ಹಾಕಿತು. ವಿಷ್ಮಿ ಗುಣರತ್ನೆ 45, ನಾಯಕಿ ಚಾಮರಿ ಅಟಪಟ್ಟು 43 ರನ್‌ ಸಿಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 87 ರನ್‌ ಕಲೆ ಹಾಕಿದರೂ ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆ ಹಾಕಲು ವಿಫಲರಾದರು. ದೀಪ್ತಿ ಶರ್ಮಾ 34 ರನ್‌ಗೆ 2 ವಿಕೆಟ್‌ ಕಿತ್ತರು.

Scroll to load tweet…

ಸುಲಭ ಗುರಿ ಬೆನ್ನತ್ತಿದ ಭಾರತ 19.1 ಓವರಲ್ಲಿ 5 ವಿಕೆಟ್‌ ನಷ್ಟದಲ್ಲಿ ಗೆಲುವು ಸಾಧಿಸಿತು. ಸ್ಮೃತಿ ಮಂಧನಾ 39, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 31 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಫಾಲಿ ವರ್ಮಾ(10 ಎಸೆತಗಳಲ್ಲಿ 17), ಮೇಘನಾ (10 ಎಸೆತಗಳಲ್ಲಿ 17) ವೇಗದ ಆಟವಾಡಿ ತಂಡವನ್ನು ಗೆಲ್ಲಿಸಿದರು. ರಣಸಿಂಗೆ ಹಾಗೂ ರಣವೀರ ತಲಾ 2 ವಿಕೆಟ್‌ ಪಡೆದರು. ಸರಣಿಯ 3ನೇ ಪಂದ್ಯ ಸೋಮವಾರ ನಡೆಯಲಿದೆ.