"

ಕೋಲ್ಕತಾ(ಫೆ.29): ಕರ್ನಾಟಕ ಎದುರಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಅನುಸ್ತೂಪ್ ಮಜುಂದಾರ್(120) ಅಜೇಯ ಶತಕದ ನೆರವಿನಿಂದ ಬಂಗಾಳ ತಂಡವು ಮೊದಲ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 275 ರನ್ ಬಾರಿಸಿದೆ.

ಇಲ್ಲಿನ ಈಡನ್ ಗಾರ್ಡನ್‌ ಮೈದಾನದಲ್ಲಿ  ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಕರ್ನಾಟಕ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪರಿಣಾಮ ಬಂಗಾಳ ತಂಡ 67 ರನ್ ಗಳಿಸುವಷ್ಟರಲ್ಲಿ 6 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. 

ರಣಜಿ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ, DRSನಲ್ಲಿ ರಾಜ್ಯಕ್ಕೆ ಮೊದಲ ಯಶಸ್ಸು

ಆಸರೆಯಾದ ಅನುಸ್ತೂಪ್- ಅಕ್ಷದೀಪ್: ಒಂದು ಹಂತದಲ್ಲಿ ಬಂಗಾಳ ತಂಡ ನೂರು ರನ್‌ಗಳೊಳಗಾಗಿ ಆಲೌಟ್ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಏಳನೇ ವಿಕೆಟ್‌ಗೆ ಅನುಸ್ತೂಪ್ ಮಜುಂದಾರ್ ಹಾಗೂ ಶಹಬಾಜ್ ಅಹಮ್ಮದ್ ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಶಹಬಾಜ್ ಅಹಮ್ಮದ್ 35 ರನ್ ಬಾರಿಸಿ ಮಿಥುನ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.  ಆ ಬಳಿಕ ಅಕ್ಷದೀಪ್ ಕೂಡಿಕೊಂಡ ಮಜುಂದಾರ್ ಜೋಡಿ 103 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಇನ್ನೂರರ ಗಡಿ ದಾಟಿಸಿದರು. ಅಕ್ಷದೀಪ್ 72 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ಅನುಸ್ತೂಪ್ 173 ಎಸೆತಗಳಲ್ಲಿ 18 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 120 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕರ್ನಾಟಕ ಪರ ಅಭಿಮನ್ಯು ಮಿಥುನ್ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಪಡೆದರು. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"